HomeBusinessಇದ್ದಕ್ಕಿದ್ದಂತೆ ಮೊಬೈಲ್ ಸ್ಕ್ರೀನ್ ಸ್ಥಗಿತಗೊಂಡರೆ ಎಚ್ಚರ ; ಕ್ಷಣ ಮಾತ್ರದಲ್ಲಿ ಖಾಲಿಯಾಗಬಹುದು ಬ್ಯಾಂಕ್‌ ಖಾತೆ !

ಇದ್ದಕ್ಕಿದ್ದಂತೆ ಮೊಬೈಲ್ ಸ್ಕ್ರೀನ್ ಸ್ಥಗಿತಗೊಂಡರೆ ಎಚ್ಚರ ; ಕ್ಷಣ ಮಾತ್ರದಲ್ಲಿ ಖಾಲಿಯಾಗಬಹುದು ಬ್ಯಾಂಕ್‌ ಖಾತೆ !

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಆಕರ್ಷಕ ಜಾಹೀರಾತುಗಳು ಅಥವಾ ಅಪರಿಚಿತ ಸಂದೇಶಗಳಲ್ಲಿನ ಕೊಂಡಿಗಳನ್ನು ಒತ್ತಿದಾಗ ಮೊಬೈಲ್ ಪರದೆ ಇದ್ದಕ್ಕಿದ್ದಂತೆ ಕೆಲಸ ಮಾಡದೆ ನಿಂತುಹೋದರೆ ಅದನ್ನು ಕೇವಲ ಸಾಮಾನ್ಯ ತಾಂತ್ರಿಕ ತೊಂದರೆ ಎಂದು ಭಾವಿಸಬೇಡಿ. ಇಂತಹ ಸ್ಥಗಿತತೆಯು ಗ್ರಾಹಕರ ಗಮನವನ್ನು ಬೇರೆಡೆ ಸೆಳೆದು, ಅವರ ಖಾತೆಯಿಂದ ಹಣ ಲಪಟಾಯಿಸಲು ಸೈಬರ್ ವಂಚಕರು ರೂಪಿಸಿರುವ ಅತ್ಯಂತ ಅಪಾಯಕಾರಿ ತಂತ್ರವಾಗಿರಬಹುದು ಎಂದು ಮಾಹಿತಿ ತಂತ್ರಜ್ಞಾನ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಮೊಬೈಲ್ ಪರದೆ ನಿಂತುಹೋದಾಗ ಬಳಕೆದಾರರು ಗಾಬರಿಯಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು, ತಾಂತ್ರಿಕ ಸಹಾಯ ಒದಗಿಸುವವರಂತೆ ನಟಿಸಿ ಸಂಪರ್ಕಿಸುತ್ತಾರೆ. ಬ್ಯಾಂಕಿಂಗ್ ಸೇವೆ ಅಥವಾ ಆನ್‌ಲೈನ್ ಪಾವತಿ ವ್ಯವಸ್ಥೆಯಲ್ಲಿ ದೋಷವಿದೆ ಎಂದು ನಂಬಿಸಿ, ಸಮಸ್ಯೆಯನ್ನು ಸರಿಪಡಿಸಲು, ನಗದು ಬಹುಮಾನ ಪಡೆಯಲು ಅಥವಾ ಖಾತೆ ದೃಢೀಕರಣಕ್ಕಾಗಿ ಅಪರಿಚಿತ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವಂತೆ ಸೂಚಿಸುತ್ತಾರೆ. ಇವು ವಾಸ್ತವವಾಗಿ ಮೊಬೈಲ್ ನಿಯಂತ್ರಣವನ್ನು ಕದಿಯುವ ಅಪಾಯಕಾರಿ ತಂತ್ರಾಂಶಗಳಾಗಿರುತ್ತವೆ.

ಇಂತಹ ನಕಲಿ ತಂತ್ರಾಂಶಗಳು ಒಮ್ಮೆ ಮೊಬೈಲ್ ಪ್ರವೇಶಿಸಿದರೆ ಸಾಕು, ಬಳಕೆದಾರರ ಅರಿವಿಲ್ಲದೆಯೇ ಸಂದೇಶಗಳು, ರಹಸ್ಯ ಸಂಕೇತಗಳು ಮತ್ತು ಪರದೆಯ ಮೇಲಿನ ಚಟುವಟಿಕೆಗಳನ್ನು ದೂರದಿಂದಲೇ ನಿಯಂತ್ರಿಸುವ ಅವಕಾಶವನ್ನು ವಂಚಕರಿಗೆ ಮಾಡಿಕೊಡುತ್ತವೆ. ಆನ್‌ಲೈನ್ ಪಾವತಿ ವ್ಯವಸ್ಥೆಯ ಭದ್ರತೆಯನ್ನು ನೇರವಾಗಿ ಮುರಿಯದೆಯೇ, ಗ್ರಾಹಕರ ಮೊಬೈಲ್ ಮೇಲಿನ ನಿಯಂತ್ರಣ ಸಾಧಿಸಿ, ಅವರ ಮೂಲಕವೇ ಪಾವತಿಯ ರಹಸ್ಯ ಸಂಖ್ಯೆಯನ್ನು ನಮೂದಿಸುವಂತೆ ಮಾಡಿ ಹಣ ವರ್ಗಾವಣೆ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಇಂತಹ ವಹಿವಾಟುಗಳು ಸಾಮಾನ್ಯ ಪಾವತಿಯಂತೆಯೇ ಕಾಣುವುದರಿಂದ ಪತ್ತೆ ಹಚ್ಚುವುದು ಕೂಡ ಕಷ್ಟವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತುರ್ತು ಪರಿಸ್ಥಿತಿಯ ಸೋಗು ಹಾಕಿ ಗ್ರಾಹಕರನ್ನು ಆತಂಕಕ್ಕೆ ತಳ್ಳಿ, ದೂರಸ್ಥ ನಿಯಂತ್ರಣ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದೇ ಈ ಜಾಲದ ಮುಖ್ಯ ಉದ್ದೇಶವಾಗಿದೆ. ಯಾವುದೇ ಬ್ಯಾಂಕ್ ಅಥವಾ ಅಧಿಕೃತ ಸಂಸ್ಥೆಯು ಸಮಸ್ಯೆ ಪರಿಹರಿಸಲು ಮೊಬೈಲ್ ಪರದೆ ಹಂಚಿಕೊಳ್ಳುವ ಅಥವಾ ಅಪರಿಚಿತ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವಂತೆ ಎಂದಿಗೂ ಗ್ರಾಹಕರಿಗೆ ಕೇಳುವುದಿಲ್ಲ ಎಂಬುದನ್ನು ಬಳಕೆದಾರರು ನೆನಪಿನಲ್ಲಿಡಬೇಕು.

ಹೀಗಾಗಿ ಮೊಬೈಲ್ ಅನಿರೀಕ್ಷಿತವಾಗಿ ಸ್ಥಗಿತಗೊಂಡ ತಕ್ಷಣ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಹಣಕಾಸಿನ ರಹಸ್ಯ ಸಂಖ್ಯೆಗಳನ್ನು ನಮೂದಿಸಬಾರದು ಹಾಗೂ ಅಪರಿಚಿತ ವ್ಯಕ್ತಿಗಳು ನೀಡುವ ಸೂಚನೆಗಳನ್ನು ಪಾಲಿಸಬಾರದು. ಅನಗತ್ಯ ತಂತ್ರಾಂಶಗಳನ್ನು ತಕ್ಷಣ ತೆಗೆದುಹಾಕಬೇಕು. ಒಂದು ವೇಳೆ ಖಾತೆಯಿಂದ ಹಣ ಕಡಿತಗೊಂಡಿದ್ದರೆ ತಕ್ಷಣ ತಮ್ಮ ಬ್ಯಾಂಕ್‌ಗೆ ಅಧಿಕೃತ ಮಾರ್ಗಗಳ ಮೂಲಕ ಮಾಹಿತಿ ನೀಡಬೇಕು ಹಾಗೂ ಸರ್ಕಾರದ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular