ಕೊಪ್ಪಳ : ಕೊಪ್ಪಳದ ಕವಳಿ ಗ್ರಾಮದಲ್ಲಿ ಏಕಾಏಕಿ ಹುಲಿ ಓಡಾಡುತ್ತಿದೆ ಎಂಬ ಸುದ್ದಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಗುಡ್ಡದ ಮೇಲೆ ಬೃಹತ್ ಹುಲಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ದೌಡಾಯಿಸಿದರು. ಆದರೆ ಪರಿಶೀಲನೆ ಬಳಿಕ ಹೊರಬಂದ ಸತ್ಯವೇ ಎಲ್ಲರನ್ನೂ ಅಚ್ಚರಿಗೊಳಿಸಿತು.! ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿರುವ ಆ ಸುದ್ದಿ ಏನದು.? ನೀವೇ ಓದಿ.
ಗ್ರಾಮದಲ್ಲಿ ಹುಲಿ ಓಡಾಡುತ್ತಿದೆ ಎಂದು ಜನರನ್ನು ಭಯಭೀತರನ್ನಾಗಿಸಿದ ಬಾಲಕನೊಬ್ಬನಿಗೆ ಅರಣ್ಯ ಇಲಾಖೆ ಸಿಬ್ಬಂದಿ 50 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿರುವ ಘಟನೆ ಕೊಪ್ಪಳದ ಕವಳಿ ಗ್ರಾಮದಲ್ಲಿ ನಡೆದಿದೆ.
ಕವಳಿ ಗ್ರಾಮದ ಗುಡ್ಡದ ಮೇಲೆ ಬೃಹತ್ ಗಾತ್ರದ ಹುಲಿ ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ ಪರಿಶೀಲನೆ ವೇಳೆ ಅಲ್ಲಿ ಯಾವುದೇ ಹುಲಿ ಇರಲಿಲ್ಲ ಎಂಬುದು ಗೊತ್ತಾಗಿದೆ.
ವಿಚಾರಣೆ ನಡೆಸಿದಾಗ, ಈರಣ್ಣ ಹೊನ್ನುಚ್ಚಿ ಎಂಬ ಬಾಲಕ AI ತಂತ್ರಜ್ಞಾನ ಬಳಸಿ ಹುಲಿಯ ಚಿತ್ರವನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಗುಡ್ಡದ ಫೋಟೋವೊಂದನ್ನು ಎಡಿಟ್ ಮಾಡಿ, ಅದರ ಮೇಲೆ ಹುಲಿ ಕುಳಿತಿರುವಂತೆ ಚಿತ್ರವನ್ನು ಸಿದ್ಧಪಡಿಸಿದ್ದಾನೆ. ಬಳಿಕ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ. ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ಬಂದಿದೆ. ಕೂಡಲೇ ಅವರು ಅಲ್ಲಿ ಹೋಗಿ ನೋಡಿದಾಗ ಹುಲಿ ಪತ್ತೆಯಾಗಲಿಲ್ಲ, ನಂತರ ಬಾಲಕ AI ಮೂಲಕ ಹುಲಿ ಇರುವ ಸುಳ್ಳು ಚಿತ್ರ ಸೃಷ್ಟಿಸಿ, ಗ್ರಾಮದಲ್ಲಿ ಭೀತಿ ಮೂಡಿಸಿದ್ದಾನೆ ಎಂದು ತಿಳಿದುಬಂದಿದೆ.
ಈರಣ್ಣನ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಕೂಲಿ ಕೆಲಸಕ್ಕೆ ತೆರಳುವಂತೆ ಪೋಷಕರು ಆತನಿಗೆ ಹೇಳಿದ್ದರು. ಆದರೆ ಕೂಲಿ ಕೆಲಸಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳಲು ಆತ AI ಮೂಲಕ ಹುಲಿ ಇರುವ ಸುಳ್ಳು ಚಿತ್ರ ಸೃಷ್ಟಿಸಿ, ಗ್ರಾಮದಲ್ಲಿ ಭೀತಿ ಮೂಡಿಸಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕನಿಗೆ ತಪ್ಪಿನ ಅರಿವು ಮೂಡಿಸುವ ಉದ್ದೇಶದಿಂ ಅರಣ್ಯ ಇಲಾಖೆ ಸಿಬ್ಬಂದಿ ಆತನನ್ನು ಅದೇ ಸ್ಥಳಕ್ಕೆ ಕರೆದೊಯ್ದು 50 ಬಾರಿ ಬಸ್ಕಿ ಹೊಡೆಯುವಂತೆ ಶಿಕ್ಷೆ ನೀಡಿದ್ದಾರೆ. ಸುಳ್ಳು ಮಾಹಿತಿ ಹಾಗೂ ನಕಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದರಿಂದ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಯಾಗಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಅಬಕಾರಿ ಅಕ್ರಮಕ್ಕೆ ಅವಕಾಶ ನೀಡದಂತೆ ಸನ್ನದುದಾರರಿಗೆ ಎಚ್ಚರಿಕೆ
ಧಾರವಾಡ : ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಅಬಕಾರಿ ಅಕ್ರಮಗಳಿಗೆ ಅವಕಾಶ ನೀಡದಂತೆ ಜಿಲ್ಲೆಯ ಎಲ್ಲ ಮದ್ಯದ ಸನ್ನದುದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಜಿಲ್ಲೆಯ ಎಲ್ಲ ವಿಧದ ಮದ್ಯದ ಸನ್ನದುದಾರರ ಸಭೆ ನಡೆಸಿ, ಸನ್ನದು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಆದೇಶದಂತೆ ಒಣ ದಿನಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆದು ಮದ್ಯ ಮಾರಾಟ ಮಾಡುವುದು ಸಂಪೂರ್ಣವಾಗಿ ನಿಷಿದ್ಧವಾಗಿದೆ ಎಂದು ಎಚ್ಚರಿಸಿದರು.
ಅದೇ ರೀತಿ, ಲೈಸೆನ್ಸ್ ಇಲ್ಲದ ಸ್ಥಳಗಳಲ್ಲಿ ಮದ್ಯವನ್ನು ಸಂಗ್ರಹಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದರೆ ಅಬಕಾರಿ ಕಾನೂನಿನಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗಣೇಶೋತ್ಸವದ ಸಂದರ್ಭದಲ್ಲಿ ಅಬಕಾರಿ ನಿಯಮಗಳ ಉಲ್ಲಂಘನೆಗೆ ಯಾವುದೇ ರೀತಿಯ ಅವಕಾಶ ನೀಡಬಾರದು. ಎಲ್ಲ ಸನ್ನದುದಾರರು ಸರ್ಕಾರದ ಆದೇಶ ಹಾಗೂ ಅಬಕಾರಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

