ಹೊಸದಿಲ್ಲಿ: ಅವನು ಒಂದು ಟ್ವೀಟ್ ಮಾಡಿದರೆ ಸಾಕು, ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭೂಕಂಪವಾಗುತ್ತದೆ. ಅವನು ಹೂಂ ಎಂದರೆ ರಾಕೆಟ್‌ಗಳು ಅಂತರಿಕ್ಷಕ್ಕೆ ಹಾರುತ್ತವೆ ಊಹೂಂ ಎಂದರೆ ಮಲ್ಟಿ-ಮಿಲಿಯನ್ ಕಂಪನಿಗಳ ಮೌಲ್ಯ ಪಾತಾಳಕ್ಕೆ ಕುಸಿಯುತ್ತದೆ ಹೌದು, ನಾವು ಹೇಳ್ತಾ ಇರೋದು ಇಡೀ ಜಗತ್ತನ್ನೇ ತನ್ನ ಬೆರಳು ತುದಿಯಲ್ಲಿ ಆಡಿಸುತ್ತಿರುವ ಟೆಸ್ಲಾ (Tesla), ಸ್ಪೇಸ್‌ಎಕ್ಸ್ (Space X) ಹಾಗೂ X (ಟ್ವಿಟರ್) ಮಾಲೀಕ ಎಲಾನ್ ಮಸ್ಕ್ (Elon Musk) ಬಗ್ಗೆ.
ಫೋರ್ಬ್ಸ್‌ನ ಪ್ರಸ್ತುತ ಲೆಕ್ಕಾಚಾರದ ಪ್ರಕಾರ, ಮಸ್ಕ್ ಅವರ ಒಟ್ಟು ಆಸ್ತಿ ಬರೋಬ್ಬರಿ 807 ಬಿಲಿಯನ್ ಡಾಲರ್ (ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 25 ಲಕ್ಷ ಕೋಟಿಗೂ ಅಧಿಕ). ಈ ದುಡ್ಡಲ್ಲಿ ಇಡೀ ಒಂದು ಊರನ್ನೇ ಕೊಂಡುಕೊಳ್ಳಬಹುದು. ಆದರೆ, ಅಚ್ಚರಿಯ ವಿಷಯ ಏನೆಂದರೆ ಈ ಜಗತ್ತಿನ ನಂಬರ್ 1 ಶ್ರೀಮಂತನಿಗೆ ತಲೆಮೇಲೆ ಒಂದು ಸ್ವಂತ ಸೂರಿಲ್ಲ
ಸದ್ಯದಲ್ಲೇ ವಾಲ್ ಸ್ಟ್ರೀಟ್ ಇತಿಹಾಸದಲ್ಲೇ ಅತಿ ದೊಡ್ಡ ಐಪಿಓ (IPO) ಬರಲಿದ್ದು, ಅದುವೇ ಮಸ್ಕ್ ಅವರ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್. ಮಾರುಕಟ್ಟೆಯಲ್ಲಿ ಇದರ ಟಿಕ್ಕರ್ ಹೆಸರು SPCX ಎಂದು ವರದಿಯಾಗಿದೆ.ಕಂಪನಿ ಮೌಲ್ಯ ಸ್ಪೇಸ್‌ಎಕ್ಸ್‌ನ ಒಟ್ಟು ಮೌಲ್ಯ 1.25 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಬಿಬಿಸಿ ವರದಿ ಪ್ರಕಾರ, ಈ ಐಪಿಓ ಯಶಸ್ವಿಯಾದರೆ ಮಸ್ಕ್ ಅವರ ಪಾಲಿನ ಮೌಲ್ಯವೇ 600 ಬಿಲಿಯನ್ ಡಾಲರ್ ದಾಟಲಿದೆ. ಟೆಸ್ಲಾ ಮತ್ತು ಅವರ ಇತರ AI ಹೂಡಿಕೆಗಳನ್ನು ಸೇರಿಸಿದರೆ ಮಸ್ಕ್ ಸಂಪತ್ತು 1 ಟ್ರಿಲಿಯನ್ ಡಾಲರ್ (ಲಕ್ಷ ಕೋಟಿ ಡಾಲರ್) ಗಡಿ ದಾಟಲಿದ್ದು, ಇತಿಹಾಸದಲ್ಲೇ ವಿಶ್ವದ ಮೊದಲ ‘ಟ್ರಿಲಿಯನೀರ್’ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
50 ಸಾವಿರ ಡಾಲರ್‌ನ ಬಾಡಿಗೆ ಮನೆಯಲ್ಲಿ ವಾಸ
ಇಷ್ಟೊಂದು ಅಗಾಧ ಸಂಪತ್ತಿದ್ದರೂ ಮಸ್ಕ್ ಸದ್ಯ ವಾಸಿಸುತ್ತಿರುವುದು ಸ್ಪೇಸ್‌ಎಕ್ಸ್‌ನ ಸ್ಟಾರ್‌ಬೇಸ್ ಕಾರ್ಯಾಚರಣೆಗಳ ಹತ್ತಿರವಿರುವ ಕೇವಲ 50 ಸಾವಿರ ಡಾಲರ್ ಮೌಲ್ಯದ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ
ಮನೆಯ ಸೀಕ್ರೆಟ್: ಇದು ಮೊದಲು ಕೇವಲ ಎರಡು ಬೆಡ್‌ರೂಮ್ ಮನೆಯಾಗಿತ್ತು. ನಂತರ ಮಸ್ಕ್ ಗ್ಯಾರೇಜ್ ಅನ್ನೇ ಮತ್ತೊಂದು ಬೆಡ್‌ರೂಮ್ ಆಗಿ ಬದಲಾಯಿಸಿಕೊಂಡಿದ್ದಾರೆ. ಇದರ ಜೊತೆಗೆ ಅತಿಥಿಗಳಿಗಾಗಿ ‘ಬಾಕ್ಸ್‌ಬ್ಲ್ ಕ್ಯಾಸಿಟಾ’ ಎಂಬ 375 ಚದರ ಅಡಿಯ ಫೋಲ್ಡಬಲ್ ಮಾಡ್ಯುಲರ್ ಹೋಮ್ ಬಳಸುತ್ತಾರೆ.
ಒಂದೇ ಒಂದು ನಿರ್ಧಾರ 7 ಐಷಾರಾಮಿ ಬಂಗಲೆಗಳು ಸೇಲ್
ಮಸ್ಕ್ ಮೊದಲಿನಿಂದಲೂ ಹೀಗೆ ಇರಲಿಲ್ಲ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಒಂದು ಕಾಲದಲ್ಲಿ ಕ್ಯಾಲಿಫೋರ್ನಿಯಾದ ಬೆಲ್ ಏರ್ ಪ್ರದೇಶದಲ್ಲಿ ಮಸ್ಕ್ ಅವರಿಗೆ 7 ಅರಮನೆಯಂತಹ ಐಷಾರಾಮಿ ಮನೆಗಳಿದ್ದವು. ಅವುಗಳ ಒಟ್ಟು ಮೌಲ್ಯ 100 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿತ್ತು. ಸ್ವಿಮ್ಮಿಂಗ್ ಪೂಲ್, ಟೆನ್ನಿಸ್ ಕೋರ್ಟ್, ಪ್ರೈವೇಟ್ ಲೈಬ್ರರಿ ಎಲ್ಲವೂ ಇತ್ತು. ಆದರೆ 2020ರಲ್ಲಿ, “ಭೌತಿಕ ವಸ್ತುಗಳು ನನ್ನ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ ಮತ್ತು ಅನಗತ್ಯ ಟೀಕೆಗೆ ಗುರಿಯಾಗಿಸುತ್ತವೆ” ಎಂದು ಹೇಳಿ ಎಲ್ಲಾ ಮನೆಗಳನ್ನು ಮಾರಿಯೇ ಬಿಟ್ಟರು!
ಮನೆ ಇಲ್ಲದಿದ್ದರೂ ಕಾರು, ಜೆಟ್‌ಗಳ ರಾಜ
ಮನೆ ವಿಚಾರದಲ್ಲಿ ಸರಳತೆ ಪ್ರದರ್ಶಿಸುವ ಮಸ್ಕ್ ಬಳಿ ಅಪರೂಪದ ಐಷಾರಾಮಿ ಕಾರುಗಳ ಕಲೆಕ್ಷನ್ ಇದೆ. ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಬಳಸಲಾದ ಪ್ರಸಿದ್ಧ ಲೋಟಸ್ ಎಸ್ಪ್ರಿಟ್ ಸಬ್‌ಮರೀನ್ ಕಾರು ಕೂಡ ಇವರ ಗ್ಯಾರೇಜ್‌ನಲ್ಲಿದೆ. ಇನ್ನು ಬಿಸಿನೆಸ್ ಟ್ರಾವೆಲ್‌ಗಾಗಿ ಅತ್ಯಾಧುನಿಕ ಖಾಸಗಿ ಜೆಟ್‌ಗಳನ್ನು (Private Jets) ಬಳಸುತ್ತಾರೆ.
ತಮ್ಮ ದಾನ-ಧರ್ಮಗಳ ಬಗ್ಗೆ ಕೇಳುವ ಟೀಕಾಕಾರರಿಗೆ ಮಸ್ಕ್ ಕೊಡುವ ಉತ್ತರ ಒಂದೇ “ನನ್ನ ಕಂಪನಿಗಳೇ ನಾನು ಜಗತ್ತಿಗೆ ನೀಡುವ ದೊಡ್ಡ ದಾನ. ಟೆಸ್ಲಾ ಪರಿಸರ ಕಾಪಾಡುತ್ತದೆ, ಸ್ಪೇಸ್‌ಎಕ್ಸ್ ಮಾನವಕುಲದ ಭವಿಷ್ಯಕ್ಕಾಗಿ ಕೆಲಸ ಮಾಡುತ್ತದೆ ಮತ್ತು ನ್ಯೂರಾಲಿಂಕ್ ಭವಿಷ್ಯದ ಅಪಾಯಗಳನ್ನು ತಗ್ಗಿಸುತ್ತದೆ.” ಸ್ಪೇಸ್‌ಎಕ್ಸ್ ಐಪಿಓ ಲಾಂಚ್ ಆದ ಮೇಲೆ ಮಸ್ಕ್ ಸಂಪತ್ತಿನ ಸಾಮ್ರಾಜ್ಯ ಇತಿಹಾಸದಲ್ಲಿ ಯಾವ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಇಡೀ ಜಗತ್ತು ಕಾಯುತ್ತಿದೆ.

