ನವದೆಹಲಿ- ದೇಶದ ಕೃಷಿ ಆರ್ಥಿಕತೆಗೆ ಜೀವನಾಡಿಯಾಗಿರುವ ಮುಂಗಾರು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಕೈಹಿಡಿಯದೆ ಹೋಗುವ ಆತಂಕ ಹೆಚ್ಚಾಗಿದೆ. ಎಲ್ ನಿನೊ ಪರಿಸ್ಥಿತಿಯ ಪ್ರಭಾವದಿಂದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಮಳೆಯ ಒಟ್ಟು ಪ್ರಮಾಣವು ದೀರ್ಘಕಾಲೀನ ಸರಾಸರಿಗಿಂತ ಶೇ.15ರಷ್ಟು ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಅಂಕಿಅಂಶಗಳನ್ನು ಆಧರಿಸಿದ ಇತ್ತೀಚಿನ ವರದಿಗಳು ತಿಳಿಸಿವೆ. ಈ ಕೊರತೆ ಮುಂದುವರಿದರೆ, 2009ರ ಬಳಿಕ ದೇಶ ಕಂಡ ಅತ್ಯಂತ ದುರ್ಬಲ ಮುಂಗಾರು ಇದಾಗುವ ಸಾಧ್ಯತೆ ಇದೆ. 2009ರಲ್ಲಿ ಸಾಮಾನ್ಯಕ್ಕಿಂತ ಶೇ.18ರಷ್ಟು ಕಡಿಮೆ ಮಳೆಯಾಗಿತ್ತು.
ಮುಂಗಾರು ಋತುವಿನ ಅಂತ್ಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಳೆಯ ಕೊರತೆ ಇದೀಗ ಕೃಷಿ ಉತ್ಪಾದನೆ ಮಾತ್ರವಲ್ಲದೆ ಆಹಾರ ಬೆಲೆಗಳ ಮೇಲೂ ಪರಿಣಾಮ ಬೀರುವ ಆತಂಕವನ್ನು ಹುಟ್ಟುಹಾಕಿದೆ. ಕೋಟ್ಯಂತರ ರೈತರು ನೀರಾವರಿಗಾಗಿ ಮುಂಗಾರು ಮಳೆಯನ್ನೇ ಅವಲಂಬಿಸಿರುವುದರಿಂದ ಮಳೆಯ ಕೊರತೆಯು ಖಾರಿಫ್ ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅಕ್ಕಿ, ಸಕ್ಕರೆ ಮತ್ತು ಹತ್ತಿ ಸೇರಿದಂತೆ ಪ್ರಮುಖ ಕೃಷಿ ಉತ್ಪನ್ನಗಳ ಉತ್ಪಾದನೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ಆರಂಭದಲ್ಲೇ ಎಚ್ಚರಿಕೆ ನೀಡಿದ್ದ IMD
ಆರಂಭದಲ್ಲೇ ಎಚ್ಚರಿಕೆ ನೀಡಿದ್ದ IMD
ಈ ಬಾರಿ ಮುಂಗಾರು ದುರ್ಬಲವಾಗುವ ಸಾಧ್ಯತೆಯ ಬಗ್ಗೆ IMD ಮೇ ತಿಂಗಳಲ್ಲೇ ಮುನ್ಸೂಚನೆ ನೀಡಿತ್ತು. ಆಗ ಇಡೀ ಋತುವಿನಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ.10ರಷ್ಟು ಮಳೆ ಕೊರತೆಯಾಗುವ ಸಾಧ್ಯತೆ ಅಂದಾಜಿಸಲಾಗಿತ್ತು. ಆದರೆ ನಂತರದ ಬೆಳವಣಿಗೆಗಳಲ್ಲಿ ಮಳೆಯ ಕೊರತೆ ಮತ್ತಷ್ಟು ಹೆಚ್ಚಾಗಿದೆ. ಜೂನ್‌ನಲ್ಲಿ ತೀವ್ರ ಮಳೆ ಕೊರತೆ ಕಂಡುಬಂದಿದ್ದು, ಜುಲೈನಲ್ಲಿ ಮಳೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ ಆಗಸ್ಟ್‌ನಲ್ಲಿಯೂ ಮಳೆ ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು. ಸೆಪ್ಟೆಂಬರ್‌ನಲ್ಲೂ ಕೊರತೆ ಮುಂದುವರಿದಿರುವುದರಿಂದ ಋತುವಿನ ಒಟ್ಟಾರೆ ಚಿತ್ರಣ ದುರ್ಬಲವಾಗಿದೆ.
ಮುಂಗಾರು ಹಿಂಪಡೆಯುವ ಪ್ರಕ್ರಿಯೆ ಕೂಡ ಆರಂಭವಾಗುವ ಹಂತಕ್ಕೆ ಬಂದಿದ್ದು, ಉತ್ತರ-ಪಶ್ಚಿಮ ಭಾರತದಲ್ಲಿ ಸೆಪ್ಟೆಂಬರ್ 19ರ ಸುಮಾರಿಗೆ ಮುಂಗಾರು ಹಿಂಪಡೆಯುವ ಸಾಧ್ಯತೆಯನ್ನು IMD ಸೂಚಿಸಿತ್ತು. ಹೀಗಾಗಿ ಉಳಿದ ದಿನಗಳಲ್ಲಿ ಬೀಳುವ ಮಳೆಯ ಪ್ರಮಾಣವು ಒಟ್ಟಾರೆ ಕೊರತೆಯನ್ನು ಎಷ್ಟರ ಮಟ್ಟಿಗೆ ತಗ್ಗಿಸಲಿದೆ ಎಂಬುದು ಪ್ರಮುಖವಾಗಲಿದೆ.
ಚಂಡಮಾರುತದಿಂದ ಸ್ವಲ್ಪ ಪರಿಹಾರ ಸಾಧ್ಯತೆ
ಚಂಡಮಾರುತದಿಂದ ಸ್ವಲ್ಪ ಪರಿಹಾರ ಸಾಧ್ಯತೆ
ಸೆಪ್ಟೆಂಬರ್‌ನ ಕೊನೆಯ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಉಷ್ಣವಲಯದ ಚಂಡಮಾರುತ ರೂಪುಗೊಳ್ಳಲು ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆಸ್ಟ್ರೇಲಿಯಾ ಮೂಲದ Global Weather Climate Analyticsನ ವ್ಯವಸ್ಥಾಪಕ ನಿರ್ದೇಶಕ ಕ್ರಿಶ್ಚಿಯನ್ ವರ್ನರ್ ಹೇಳಿದ್ದಾರೆ. ಅಂತಹ ವ್ಯವಸ್ಥೆ ರೂಪುಗೊಂಡರೆ ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಆದರೆ ರಾಷ್ಟ್ರಮಟ್ಟದಲ್ಲಿ ಮುಂಗಾರು ಕೊರತೆಯನ್ನು ಗಣನೀಯವಾಗಿ ಬದಲಿಸುವಷ್ಟು ಪರಿಣಾಮ ಇದರಿಂದ ಉಂಟಾಗುವ ಸಾಧ್ಯತೆ ಕಡಿಮೆ ಎಂದು ವರ್ನರ್ ಅಭಿಪ್ರಾಯಪಟ್ಟಿದ್ದಾರೆ. ಅವರ ಅಂದಾಜಿನಂತೆ ಋತುವಿನ ಅಂತ್ಯದಲ್ಲಿ ದೇಶದ ಮಳೆ ಕೊರತೆ ಶೇ.13ರಿಂದ 16ರ ನಡುವೆ ಉಳಿಯಬಹುದು.
ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ CRUCIAL ಮುನ್ಸೂಚನಾ ವೇದಿಕೆಯ ಅಂದಾಜು ಕೂಡ ಆತಂಕಕಾರಿ ಚಿತ್ರಣ ನೀಡಿದೆ. ವೇದಿಕೆಯ ಪ್ರಕಾರ, ಮುಂಗಾರು ಸಾಮಾನ್ಯಕ್ಕಿಂತ ಶೇ.10ರಿಂದ 20ರಷ್ಟು ಕೊರತೆಯೊಂದಿಗೆ ಅಂತ್ಯಗೊಳ್ಳುವ ಸಾಧ್ಯತೆ ಶೇ.68ರಷ್ಟಿದೆ ಎಂದು ಗ್ರಹ ವಿಜ್ಞಾನಿ ಮಾರ್ಕ್ ರೌಲ್‌ಸ್ಟನ್ ತಿಳಿಸಿದ್ದಾರೆ. ಇದು ಅಂತಿಮ ಮುನ್ಸೂಚನೆಯಲ್ಲವಾದರೂ, ಋತುವಿನ ಕೊನೆಯ ಹಂತದಲ್ಲೂ ಮಳೆ ಕೊರತೆ ಮುಂದುವರಿಯುವ ಅಪಾಯವನ್ನು ಸೂಚಿಸುತ್ತದೆ.
ಆಹಾರ ಬೆಲೆಗಳ ಮೇಲೆ ಒತ್ತಡ
ಆಹಾರ ಬೆಲೆಗಳ ಮೇಲೆ ಒತ್ತಡ
ಮಳೆಯ ಕೊರತೆಯ ಪರಿಣಾಮ ಈಗಾಗಲೇ ಬೆಲೆ ಸೂಚ್ಯಂಕಗಳಲ್ಲೂ ಗೋಚರಿಸುತ್ತಿದೆ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಆಗಸ್ಟ್‌ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಶೇ.4.82ಕ್ಕೆ ಏರಿಕೆಯಾಗಿದ್ದು, ಜುಲೈನಲ್ಲಿ ಅದು ಶೇ.4.45ರಷ್ಟಿತ್ತು. ಇದೇ ವೇಳೆ ಆಹಾರ ಹಣದುಬ್ಬರ ಶೇ.5.52ರಿಂದ ಶೇ.5.95ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆಹಾರ ಹಣದುಬ್ಬರ ಶೇ.6.13ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ.5.64ರಷ್ಟಿದೆ.
ಇದಕ್ಕೆ ಮಳೆಯ ಕೊರತೆ ಮತ್ತಷ್ಟು ಸೇರ್ಪಡೆಯಾದರೆ ಅಕ್ಕಿ, ಬೇಳೆ, ಧಾನ್ಯ, ಸಕ್ಕರೆ, ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳ ಪೂರೈಕೆ ಮತ್ತು ಬೆಲೆಗಳ ಮೇಲೆ ಒತ್ತಡ ಹೆಚ್ಚಾಗಬಹುದು. QuantEco ಸಂಸ್ಥೆಯ ಅರ್ಥಶಾಸ್ತ್ರಜ್ಞೆ ಯುವಿಕಾ ಸಿಂಘಾಲ್ ಅವರ ಅಂದಾಜಿನ ಪ್ರಕಾರ, ಸಾಮಾನ್ಯ ಮಟ್ಟಕ್ಕೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಪ್ರತಿ ಒಂದು ಶೇಕಡಾವಾರು ಅಂಶದ ಕೊರತೆಯು ಆಹಾರ ಹಣದುಬ್ಬರವನ್ನು ಸರಾಸರಿ ಸುಮಾರು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಬಹುದು.
ಸಕ್ಕರೆ ಆಮದು, ಈರುಳ್ಳಿ ಮಾರಾಟಕ್ಕೆ ಸರ್ಕಾರದ ಕ್ರಮ
ಸಕ್ಕರೆ ಆಮದು, ಈರುಳ್ಳಿ ಮಾರಾಟಕ್ಕೆ ಸರ್ಕಾರದ ಕ್ರಮ
ಆಹಾರ ಬೆಲೆಗಳ ಮೇಲಿನ ಒತ್ತಡವನ್ನು ತಗ್ಗಿಸಲು ಕೇಂದ್ರ ಸರ್ಕಾರ ಈಗಾಗಲೇ ಪೂರೈಕೆ ಹೆಚ್ಚಿಸುವ ಕ್ರಮಗಳಿಗೆ ಮುಂದಾಗಿದೆ. ದೇಶೀಯ ಸಕ್ಕರೆ ಬೆಲೆ ಏರಿಕೆಯನ್ನು ನಿಯಂತ್ರಿಸಲು ಒಂದು ದಶಕದ ಬಳಿಕ ಮೊದಲ ಬಾರಿಗೆ ಕಚ್ಚಾ ಸಕ್ಕರೆಯ ಆಮತಿಗೆ ಅವಕಾಶ ನೀಡಲಾಗಿದ್ದು, 10 ಲಕ್ಷ ಟನ್‌ಗಳಷ್ಟು ಕಚ್ಚಾ ಸಕ್ಕರೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಕ್ರಮವು ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.
ಇದೇ ವೇಳೆ ಕೆಲವು ರಾಜ್ಯಗಳಲ್ಲಿ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರ ಮೇಲಿನ ಬೆಲೆ ಒತ್ತಡವನ್ನು ತಗ್ಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಮುಂದಿನ ದಿನಗಳು ನಿರ್ಣಾಯಕ
ಮುಂದಿನ ದಿನಗಳು ನಿರ್ಣಾಯಕ
ಮುಂಗಾರು ಕೊರತೆಯ ಪರಿಣಾಮವನ್ನು ಕೇವಲ ಪ್ರಸಕ್ತ ಖಾರಿಫ್ ಬೆಳೆಗಳಿಗೆ ಸೀಮಿತವಾಗಿ ನೋಡಲಾಗುವುದಿಲ್ಲ. ಮಣ್ಣಿನ ತೇವಾಂಶ, ಜಲಾಶಯಗಳ ನೀರಿನ ಲಭ್ಯತೆ, ಭೂಗರ್ಭ ಜಲಮಟ್ಟ ಮತ್ತು ಮುಂದಿನ ರಬಿ ಹಂಗಾಮಿನ ಬಿತ್ತನೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ವಿಶೇಷವಾಗಿ ಮಳೆ ಅವಲಂಬಿತ ಕೃಷಿ ಪ್ರದೇಶಗಳಲ್ಲಿ ರೈತರ ಆದಾಯದ ಮೇಲಿನ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಹೀಗಾಗಿ ಉಳಿದ ಮುಂಗಾರು ದಿನಗಳಲ್ಲಿ ದೊರೆಯುವ ಮಳೆ, ಜಲಾಶಯಗಳ ನೀರಿನ ಸ್ಥಿತಿ, ಬೆಳೆ ಇಳುವರಿ ಹಾಗೂ ಮಾರುಕಟ್ಟೆಯಲ್ಲಿನ ಆಹಾರ ಧಾನ್ಯಗಳ ಪೂರೈಕೆ ಈಗ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳಾಗಿವೆ. ಮಳೆಯ ಕೊರತೆ ಎರಡಂಕಿಯಲ್ಲೇ ಉಳಿದರೆ, ಕೃಷಿ ಉತ್ಪಾದನೆಯ ಜತೆಗೆ ಆಹಾರ ಬೆಲೆ ನಿಯಂತ್ರಣವೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮತ್ತೊಂದು ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.

