ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ (CCB) ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಗಲೂರು ವ್ಯಾಪ್ತಿಯ ಪ್ರತಿಷ್ಠಿತ ‘ಪ್ರೆಸ್ಟೀಜ್ ಫೈನ್ ಬೇರಿ ಪಾರ್ಕ್’ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರ ಮೇಲೆ ದಾಳಿ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.
ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನಾ (25) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಪೆಡ್ಲಿಂಗ್ ಅನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು.
ಕಾರ್ಯಾಚರಣೆಯ ವೇಳೆ ಭಾರಿ ಪ್ರಮಾಣದ ಎಲ್ಎಸ್ಡಿ (LSD), ಹೈಡ್ರೋ ಗಾಂಜಾ ಮತ್ತು ಚರಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 10 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಅಂತರಾಷ್ಟ್ರೀಯ ನಂಟು:ಥಾಯ್ಲೆಂಡ್‌ನಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಸುತ್ತಿದ್ದ ವಿನ್ಸೆಂಟ್ ಎಂಬಾತನ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತ ಆಗಾಗ ವಿಮಾನದ ಮೂಲಕ ಬೆಂಗಳೂರಿಗೆ ಡ್ರಗ್ಸ್ ತರುತ್ತಿದ್ದ ಎನ್ನಲಾಗಿದೆ. ವಿನ್ಸೆಂಟ್ ಪೂರೈಸುತ್ತಿದ್ದ ಡ್ರಗ್ಸ್ ಅನ್ನು ಅಶ್ವಿನ್ ಮತ್ತು ಮೊಬಿನಾ ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಇವರು ಪ್ರತಿಷ್ಠಿತ ಅಪಾರ್ಟ್ಮೆಂಟ್ ಅನ್ನು ತಮ್ಮ ಅಡಗುತಾಣವನ್ನಾಗಿ ಮಾಡಿಕೊಂಡಿದ್ದರು.
ಮುಂದಿನ ಕ್ರಮ
ಸದ್ಯ ಸಿಸಿಬಿ ಪೊಲೀಸರು ಫ್ಲ್ಯಾಟ್ ಮಾಲೀಕರ ಬಗ್ಗೆಯೂ ತನಿಖೆ ಕೈಗೆತ್ತಿಕೊಂಡಿದ್ದಾರೆ. ಬಾಡಿಗೆಗೆ ನೀಡುವ ಮುನ್ನ ಮಾಲೀಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಈ ಜಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

