ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ನಡೆದ ಜಾರಿ ನಿರ್ದೇಶನಾಲಯ (ಇಡಿ) ದಾಳಿ ವೇಳೆ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಚಹಾರ ನಡೆದಿರುವ ಬಗ್ಗೆ ದಾಖಲೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇಡಿ ದಾಳಿ ವೇಳೆ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಅಲ್ಲದೇ BVEPL ಕಂಪನಿಯಿಂದ ಕಿಕ್ ಬ್ಯಾಕ್ ಪಡೆದಿರುವ ಆರೋಪದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಇಡಿ ಅಧಿಕಾರಿಗಳು ಈ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ಮಂತ್ರಿಗಳ ವಿರುದ್ಧ ನೇರವಾಗಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಇಡಿ ಸಂಸ್ಥೆಗೆ ಅಧಿಕಾರವಿಲ್ಲ. ಈ ಹಿನ್ನೆಲೆ ಪತ್ತೆಯಾಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳ ಆಧಾರದ ಮೇಲೆ, ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆಯಲು ಇಡಿ ಮುಂದಾಗಿದೆ.
ಲೋಕಾಯುಕ್ತ ಸಂಸ್ಥೆಯು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಇಡಿ ಕೋರಲಿದೆ. ಈ ಹಿನ್ನೆಲೆಯಲ್ಲಿ ಇಡಿ ದಾಳಿ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಲೋಕಾಯುಕ್ತ ಶಾಕ್ ಎದುರಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.

