ಮಧ್ಯಾಹ್ನದ ಊಟಕ್ಕೆ ಅಥವಾ ಕಚೇರಿಗೆ ಒಯ್ಯುವ ಲಂಚ್ ಬಾಕ್ಸ್‌ಗೆ ಏನಾದರೂ ವಿಭಿನ್ನವಾಗಿ ಮತ್ತು ಸುಲಭವಾಗಿ ತಯಾರಿಸುವ ಆಲೋಚನೆಯಲ್ಲಿದ್ದರೆ ಚಟ್ನಿ ಪುಲಾವ್ ಅತ್ಯುತ್ತಮ ಆಯ್ಕೆಯಾಗಿದೆ. ಅಡುಗೆ ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಯೇ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ಈ ಪುಲಾವ್ ಅನ್ನು ತಯಾರಿಸಬಹುದು. ಪುದೀನಾ ಮತ್ತು ಕೊತ್ತಂಬರಿ ಸೊಪ್ಪಿನ ಘಮ ಈ ಪುಲಾವ್‌ನ ವಿಶೇಷತೆಯಾಗಿದೆ.
ಬೇಕಾಗುವ ಸಾಮಗ್ರಿಗಳು: ಪುಲಾವ್ ತಯಾರಿಸಲು ಬಾಸುಮತಿ ಅಕ್ಕಿ, ಎಣ್ಣೆ ಅಥವಾ ತುಪ್ಪ, ಏಲಕ್ಕಿ, ಜೀರಿಗೆ, ಬೆಳ್ಳುಳ್ಳಿ, ಪಲಾವ್ ಎಲೆ, ಈರುಳ್ಳಿ ಮತ್ತು ಉಪ್ಪು ಬೇಕಾಗುತ್ತದೆ. ಚಟ್ನಿ ತಯಾರಿಸಲು ತಾಜಾ ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳು, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಟೊಮೆಟೊ, ಈರುಳ್ಳಿ, ಜೀರಿಗೆ ಪುಡಿ, ಕಪ್ಪು ಉಪ್ಪು ಮತ್ತು ನಿಂಬೆ ರಸದ ಅವಶ್ಯಕತೆ ಇರುತ್ತದೆ.
ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಏಲಕ್ಕಿ, ಜೀರಿಗೆ ಮತ್ತು ಪಲಾವ್ ಎಲೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ನೀರು ಮತ್ತು ಉಪ್ಪು ಸೇರಿಸಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ತೊಳೆದಿಟ್ಟ ಬಾಸುಮತಿ ಅಕ್ಕಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಬೇಯಿಸಿ.
ಇನ್ನೊಂದೆಡೆ ಮಿಕ್ಸಿ ಜಾರ್‌ನಲ್ಲಿ ಕೊತ್ತಂಬರಿ, ಪುದೀನಾ, ಶುಂಠಿ, ಬೆಳ್ಳುಳ್ಳಿ, ಟೊಮೆಟೊ, ಈರುಳ್ಳಿ ಮತ್ತು ಸಾಂಬಾರ ಪದಾರ್ಥಗಳನ್ನು ಹಾಕಿ ನುಣ್ಣಗೆ ರುಬ್ಬಿ ಚಟ್ನಿ ತಯಾರಿಸಿಕೊಳ್ಳಿ. ನಂತರ ಒಂದು ಪ್ಯಾನ್‌ನಲ್ಲಿ ಬೆಣ್ಣೆ ಮತ್ತು ಇಂಗು ಹಾಕಿ ಒಗ್ಗರಣೆ ನೀಡಿ ಅದಕ್ಕೆ ತಯಾರಿಸಿದ ಚಟ್ನಿಯನ್ನು ಸೇರಿಸಿ ಕುದಿಸಿ. ಈಗ ಈ ಚಟ್ನಿ ಮಿಶ್ರಣಕ್ಕೆ ಮೊದಲೇ ತಯಾರಿಸಿಟ್ಟುಕೊಂಡ ಅನ್ನವನ್ನು ಸೇರಿಸಿ ಮೆಲ್ಲಗೆ ಕೈಯಾಡಿಸಿ. ಚಟ್ನಿಯ ನೀರೆಲ್ಲಾ ಆರಿ ಅನ್ನದೊಂದಿಗೆ ಚೆನ್ನಾಗಿ ಬೆರೆತ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಟ್ನಿ ಪುಲಾವ್ ಸವಿಯಲು ಸಿದ್ಧ.

