ವಿಜಯಪುರ : ವಿಜಯಪುರದ ಹಲವೆಡೆ ಇಂದು ಬೆಳಿಗ್ಗೆ 11:26ರ ಸುಮಾರಿಗೆ ಏಕಾಏಕಿ ದೊಡ್ಡದಾಗಿ ಸ್ಫೋಟದ ಮಾದರಿಯಲ್ಲಿ ಶಬ್ದ ಕೇಳಿಬಂದಿದೆ. ಆ ಸದ್ದಿನ ಬೆನ್ನಲ್ಲೇ ಕೆಲ ಕ್ಷಣಗಳ ಕಾಲ ಭೂಮಿ ನಡುಗಿದೆ. ಇದರಿಂದ ಗಾಬರಿಗೊಂಡ ಸಾರ್ವಜನಿಕರು ಮತ್ತು ಗ್ರಾಮಸ್ಥರು ತಕ್ಷಣವೇ ತಮ್ಮ ಮನೆ ಹಾಗೂ ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಮೊದಲು ದೊಡ್ಡ ಬ್ಲಾಸ್ಟ್ ಆದ ಹಾಗೆ ಶಬ್ದ ಕೇಳಿಸಿತು, ಆಮೇಲೆ ಕಣ್ಣೆದುರೇ ಭೂಮಿ ಕಂಪಿಸಿತು. ಏನು ಮಾಡಬೇಕೆಂದೇ ತೋಚದೆ ರಸ್ತೆಗೆ ಓಡಿ ಬಂದೆವು” ಎಂದು ಸ್ಥಳೀಯರು ಆತಂಕ ಹಂಚಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಜನತೆಗೆ ಈ ಭೂಕಂಪನದ ಭೀತಿ ಹೊಸದೇನಲ್ಲ. ಕಳೆದ ಮೂರು-ನಾಲ್ಕು ವರ್ಷಗಳಿಂದ ಈ ಭಾಗದಲ್ಲಿ ಆಗಾಗ ಭೂಮಿ ಕಂಪಿಸುತ್ತಲೇ ಇದೆ. ಕಳೆದ ತಿಂಗಳಷ್ಟೇ ಇಂತಹದೇ ಸರಣಿ ಕಂಪನಗಳು ಸಂಭವಿಸಿದ್ದವು. ಪದೇ ಪದೇ ಭೂಮಿ ನಡುಗುತ್ತಿರುವುದರಿಂದ ಗಡಿ ಭಾಗದ ಜನಸಾಮಾನ್ಯರು ನಿತ್ಯವೂ ಆತಂಕದ ನೆರಳಿನಲ್ಲೇ ದಿನ ದೂಡುವಂತಾಗಿದೆ. ಸದ್ಯಕ್ಕೆ ಯಾವುದೇ ಜೀವ ಅಥವಾ ಆಸ್ತಿ ಪಾಸ್ತಿ ಹಾನಿಯಾದ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ.
ಎಲ್ಲೆಲ್ಲಿ ಭೂಕಂಪನದ ಅನುಭವವಾಗಿದೆ?
ತಿಕೋಟ ತಾಲೂಕಿನ ಈ ಕೆಳಗಿನ ಗ್ರಾಮಗಳಲ್ಲಿ ಜನರಿಗೆ ಭೂಮಿ ನಡುಗಿದ ತೀವ್ರ ಅನುಭವವಾಗಿದೆ:
- ಘೋಣಸಗಿ
- ಕಳ್ಳವಟಗಿ
- ಬಾಬಾನಗರ
- ಬಿಜ್ಜರಗಿ
- ಸೋಮದೇವರಟ್ಟಿ
- ಮಲಕನದೇವರಟ್ಟಿ

