ದುಬೈನಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಬದುಕು ಎಷ್ಟು ಕಠಿಣವಾಗಿರುತ್ತದೆ ಎಂಬುದನ್ನು ಸಾರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಮೂಲದ ಪಂಕಜ್ ಚೌಹಾಣ್ ಎಂಬುವವರು ಹಂಚಿಕೊಂಡಿರುವ ಈ ದೃಶ್ಯಗಳು ವಿದೇಶದಲ್ಲಿ ಹಣ ಗಳಿಸಲು ಹೋದವರ ಅಸಲಿ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿವೆ.
ಈ ವಿಡಿಯೋದಲ್ಲಿ ಮುಂಜಾನೆ 4:45 ಗಂಟೆಗೆ ನೂರಾರು ಕಾರ್ಮಿಕರು ಸಾಲಾಗಿ ನಿಂತು ಬಸ್ ಹತ್ತುವ ದೃಶ್ಯವಿದೆ. ಕಾರ್ಮಿಕರ ವಸತಿ ನಿಲಯದ ಬಳಿ ಸೆರೆಹಿಡಿಯಲಾದ ಈ ದೃಶ್ಯದಲ್ಲಿ, ಸುರಕ್ಷತಾ ಹೆಲ್ಮೆಟ್ ಧರಿಸಿರುವ ಕಾರ್ಮಿಕರು ಸೂರ್ಯೋದಯಕ್ಕೂ ಮುನ್ನವೇ ತಮ್ಮ ಕೆಲಸದ ಸ್ಥಳಗಳಿಗೆ ತೆರಳಲು ಸಿದ್ಧರಾಗಿ ನಿಂತಿದ್ದಾರೆ. “ದುಬೈನ ಇಂದಿನ ಪರಿಸ್ಥಿತಿ ಹೀಗಿದೆ” ಎಂದು ವಿಡಿಯೋ ಮಾಡುವ ವ್ಯಕ್ತಿ ಕಾಮೆಂಟ್ ಮಾಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.
ವಲಸೆ ಬದುಕಿನ ಕಹಿ ಸತ್ಯ
ಸುಮಾರು 6 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿರುವ ಈ ವಿಡಿಯೋಗೆ ಜನರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. “ನಮ್ಮ ಭಾರತಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ಕುಟುಂಬಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ” ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ತಾವು ಕೂಡ ಸೌದಿ ಅರೇಬಿಯಾ ಸೇರಿದಂತೆ ಇತರ ಅರಬ್ ದೇಶಗಳಲ್ಲಿ ಹಲವು ವರ್ಷಗಳ ಕಾಲ ಇದೇ ರೀತಿಯ ಸಂಕಷ್ಟದ ಬದುಕು ನಡೆಸಿದ್ದಾಗಿ ಕೆಲವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಕುಟುಂಬದ ದೂರವಿರುವ ನೋವು
ಹಣ ಗಳಿಸುವ ಉದ್ದೇಶದಿಂದ ಕುಟುಂಬವನ್ನು ಬಿಟ್ಟು ಸಾವಿರಾರು ಮೈಲಿ ದೂರ ಹೋಗುವವರ ಬಲಿದಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. “ಸಂತೋಷವಿರಲಿ ಅಥವಾ ಕಷ್ಟವಿರಲಿ, ಕುಟುಂಬದವರ ಜೊತೆಗಿದ್ದು ದುಡಿಯುವುದೇ ನಿಜವಾದ ಸುಖ” ಎಂಬ ಸಂದೇಶಗಳು ವಿಡಿಯೋದ ಕಾಮೆಂಟ್ ಬಾಕ್ಸ್‌ನಲ್ಲಿ ತುಂಬಿಹೋಗಿವೆ. ಭಾರತದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ದೂರು ನೀಡುವವರು ಒಮ್ಮೆ ಈ ಕಾರ್ಮಿಕರ ಬದುಕನ್ನು ನೋಡಲಿ ಎಂದು ಕೆಲವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

