ಕೃತಕ ಬುದ್ಧಿಮತ್ತೆ ( AI ) ಭಾರತದ ಐಟಿ ಉದ್ಯಮವನ್ನು ಅಪಾಯಕ್ಕೆ ಸಿಲುಕಿಸಿದೆಯೇ?. ಎಲ್ಲಾ ಕಡೆ ವೈರಲ್ ಆಗುತ್ತಿರುವ ಜಾಗತಿಕ ಬುದ್ಧಿಮತ್ತೆ ಬಿಕ್ಕಟ್ಟು-2028 ಎಂಬ ವರದಿ ಬಗ್ಗೆ ಈಗ ಭಾರೀ ಚರ್ಚೆ ನಡೆಯುತ್ತಿದೆ.
ಸಿಟ್ರಿನಿ ರಿಸರ್ಚ್ (Citrini Research) ಬಿಡುಗಡೆ ಮಾಡಿರುವ ವರದಿಯ ಆತಂಕಕ್ಕೆ ಕಾರಣವಾಗಿದೆ. ಇದು ಐಟಿ ವಲಯದ ಉದ್ಯೋಗ, ಆರ್ಥಿಕ ಪರಿಸ್ಥಿತಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ? ಎಂದು ವಿಶ್ಲೇಷಣೆ ಮಾಡಿದೆ.
2028-ಜಾಗತಿಕ ಬುದ್ಧಿಮತ್ತೆ ಬಿಕ್ಕಟ್ಟು ಎಂಬ ಶೀರ್ಷಿಕೆಯ ಸಿಟ್ರಿನಿ ರಿಸರ್ಚ್‌ನ ವರದಿ ಈಗ ವೈರಲ್ ಆಗಿದೆ. 2028ರ ವೇಳೆಗೆ ವೇಗದ ಎಐ ಆಟೊಮೇಷನ್‌ನಿಂದಾಗಿ ಉಂಟಾಗಬಹುದಾದ ಬೃಹತ್ ನಿರುದ್ಯೋಗ ಮತ್ತು ಆರ್ಥಿಕ ಅಸ್ಥಿರತೆಯ ಸನ್ನಿವೇಶವನ್ನು ಇದು ವಿವರಿಸಿದೆ.
ವಿಶೇಷವಾಗಿ ಭಾರತೀಯ ಐಟಿ ಉದ್ಯಮದ ದೈತ್ಯ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋ ಅಪಾಯದಲ್ಲಿದೆ ಎಂದು ವರದಿ ಎಚ್ಚರಿಸಿದೆ. AI-ಚಾಲಿತ ಆಟೊಮೇಷನ್ ಈ ಸಂಸ್ಥೆಗಳ ವ್ಯವಹಾರ ಮಾದರಿಗಳನ್ನೇ ಬದಲಾವಣೆ ಮಾಡಲಿದೆ ಎಂದು ವರದಿ ಹೇಳಿದೆ.
ವರದಿಯ ಅಂಶಗಳು: 2028ರ ವೇಳೆಗೆ ವಾರ್ಷಿಕವಾಗಿ 200 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ರಫ್ತು ಮಾಡುತ್ತಿದ್ದ ಭಾರತದ ಐಟಿ ಸೇವಾ ವಲಯವು ಅಪಾಯ ಎದುರಿಸಲಿದೆ. ಗ್ರಾಹಕರು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ AI ಕೋಡಿಂಗ್ ಏಜೆಟ್‌ಗಳನ್ನು ಬಳಸಲು ಪ್ರಾರಂಭಿಸಲಿದ್ದಾರೆ.
ಐಟಿ ವ್ಯವಹಾರದ ಮಾದರಿಯು ಒಂದು ಮೌಲ್ಯದ ಪ್ರತಿಪಾದನೆ ಮೇಲೆ ನಿರ್ಮಿತವಾಗಿತ್ತು. ಅಮೆರಿಕನ್ ಉದ್ಯೋಗಿಗಳಿಗೆ ಹೋಲಿಸಿದರೆ ಭಾರತೀಯ ಡೆವಲಪರ್‌ಗಳ ವೆಚ್ಚ ಬಹಳ ಕಡಿಮೆ ಎಂಬುದು ಇದಾಗಿತ್ತು.
ಆದರೆ ಈಗ AI ಕೋಡಿಂಗ್ ಏಜೆಂಟ್‌ನ ಹೆಚ್ಚುವರಿ ವೆಚ್ಚವು ಮೂಲಭೂತವಾಗಿ ಕೇವಲ ವಿದ್ಯುತ್ ವೆಚ್ಚದಷ್ಟಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ. ಸೇವಾ ರಫ್ತು ದುರ್ಬಲಗೊಳ್ಳುತ್ತಿದ್ದಂತೆ, ಕೇವಲ 4 ತಿಂಗಳೊಳಗೆ ಡಾಲರ್ ಎದುರು ರೂಪಾಯಿ ಮೌಲ್ಯವು ಗಣನೀಯವಾಗಿ ಕುಸಿಯಿತು ಎಂದೂ ವರದಿ ಹೇಳಿದೆ.
2027ರ ಅವಧಿಯಲ್ಲಿ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿಗಳ ಒಪ್ಪಂದಗಳ ರದ್ದತಿ ವೇಗವಾಗಿ ಹೆಚ್ಚಾಗಲಿದೆ. ಭಾರತಕ್ಕೆ ಆಧಾರವಾಗಿದ್ದ ಸೇವಾ ವಲಯದ ಉಳಿತಾಯವು ಇಲ್ಲದಂತಾಗುವ ಕಾರಣ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿಯಲಿದೆ.
ವರದಿಯ ಪ್ರಕಾರ AI ಆಗಮನದ ಬಳಿಕ ಕಂಪನಿಗಳು ಈ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದನ್ನು ಹೆಚ್ಚಳ ಮಾಡಿವೆ. ತಂತ್ರಜ್ಞಾನವು ದಿನದಿಂದ ದಿನಕ್ಕೆ ಉತ್ತಮವಾಗುತ್ತಿದೆ ಮತ್ತು ಅಗ್ಗವಾಗುತ್ತಾ ಹೋಗುತ್ತಿದೆ. ಈಗಾಗಲೇ ಇದರ ಪರಿಣಾಮ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿವೆ.
ಉದ್ಯೋಗ ಕಡಿತದ ನಂತರ ಆ ಉಳಿತಾಯದ ಹಣವನ್ನು ಮತ್ತಷ್ಟು AI ಸಾಮರ್ಥ್ಯವನ್ನು ಖರೀದಿಸಲು ಬಳಕೆ ಮಾಡಲಿವೆ. ಇನ್ನೂ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲು ಸಹ ಕಂಪನಿಗಳು ಮುಂದಾಗಬಹುದು.
ಕೆಲಸ ಕಳೆದುಕೊಂಡವರು ಸಹಜವಾಗಿಯೇ ಖರ್ಚು ಮಾಡುವುದನ್ನು ಕಡಿಮೆ ಮಾಡಲಿದ್ದಾರೆ. ಇದು ಆರ್ಥಿಕ ಪರಿಣಾಮವನ್ನು ಉಂಟು ಮಾಡಲಿದೆ. 2028ರ ವೇಳೆಗೆ ಈ ಕುರಿತು ಸ್ಪಷ್ಟವಾದ ಚಿತ್ರಣ ಸಿಗಲಿದೆ.
ಕಂಪನಿಗಳು ತಮ್ಮ ಲಾಭದ ಪ್ರಮಾಣವನ್ನು ಉಳಿಸಿಕೊಳ್ಳಲು ಮತ್ತಷ್ಟು AI ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲಿವೆ. ಇದರಿಂದ AI ಇನ್ನೂ ಉತ್ತಮವಾಗುತ್ತಿದೆ. ಕಂಪನಿಗಳು ಯಾವ ಆರ್ಥಿಕತೆಯನ್ನು ಬದಲಾಯಿಸುತ್ತಿದ್ದವೋ ಈಗ ಅವುಗಳಿಂದಲೇ ಆರ್ಥಿಕತೆಗೆ ಅಪಾಯ ಎದುರಾಗಿದೆ.

