ನವದೆಹಲಿ: ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಅಮೆರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ 95.21ರ ಮಟ್ಟಕ್ಕೆ ಕುಸಿದಿದೆ.
ಭಾರತದ ರೂಪಾಯಿ ಅಮೆರಿಕದ ಡಾಲರ್ ಎದುರು ಕುಸಿತವಾಗುತ್ತಲೇ ಇದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ರುಪಾಯಿ ಮೌಲ್ಯವು 95ರ ಗಡಿದಾಟಿ ಕುಸಿತ ಕಂಡಿದೆ. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಡಾಲರ್ ಎದುರು ರುಪಾಯಿ 95.21 ಮಟ್ಟಕ್ಕೆ ಕುಸಿಯಿತು. ಭಾರತದ ಕರೆನ್ಸಿ ಮೌಲ್ಯದ ಕುಸಿತವನ್ನು ತಪ್ಪಿಸಲು ರಿಸರ್ವ್ ಬ್ಯಾಂಕ್ ಕೈಗೊಂಡ ಕೆಲ ಕ್ರಮಗಳು ನಿರೀಕ್ಷಿತ ಫಲ ನೀಡಿಲ್ಲ.
ವಿದೇಶೀ ಹೂಡಿಕೆಗಳ ಹೊರಹರಿವು ಸತತವಾಗಿ ನಡೆಯುತ್ತಿರುವುದು ರೂಪಾಯಿ ಮೇಲೆ ಒತ್ತಡ ಹೇರಿದಂತಾಗಿದೆ. ಬ್ಯಾಂಕುಗಳ ವಿದೇಶೀ ವಿನಿಮಯ ಸ್ಥಾನಗಳಿಗೆ ಆರ್ಬಿಐ ಮಿತಿ ಹಾಕಿದರೂ ಅದರಿಂದ ರೂಪಾಯಿ ಮೌಲ್ಯ ಕುಸಿತ ತಡೆಯಲು ಆಗಲಿಲ್ಲ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರೆದ ಯುದ್ಧ, ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆಗಳ ಹೊರಹರಿವು ಮುಂದುವರಿದಿರುವುದು ರುಪಾಯಿ ಕುಸಿತಕ್ಕೆ ಕಾರಣವಾಗಿದೆ. ಅಲ್ಲದೇ ತೈಲ ಬೆಲೆ ಹೆಚ್ಚಿರುವುದರಿಂದ ಭಾರತದ ಆಮದು ವೆಚ್ಚ ಹೆಚ್ಚಾಗಿದೆ. ಕರೆನ್ಸಿ ಮೌಲ್ಯ ಕುಸಿತ, ಆಮದು ವೆಚ್ಚದ ಏರಿಕೆ ಕೂಡ ರುಪಾಯಿ ಮೌಲ್ಯ ಕುಸಿತದ ಮೇಲೆ ಪರಿಣಾಮ ಬೀರಿದೆ.
ಕಚ್ಛಾ ತೈಲ ಬೆಲೆ ಅಧಿಕ ಮಟ್ಟದಲ್ಲಿರುವುದು ಭಾರತದ ಆರ್ಥಿಕತೆಗೂ ಹಿನ್ನಡೆ ತರುವ ಸಾಧ್ಯತೆ ಇದೆ. ಇವೆಲ್ಲವೂ ಕೂಡ ಈಕ್ವಿಟಿ ಮಾರುಕಟ್ಟೆಯನ್ನೂ ಕೆಳಗೆ ನೂಕುತ್ತಿವೆ.

