ಇಂದು ( ಮೇ 4 ) ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ತಮಿಳುನಾಡಿನಲ್ಲಿ ಮತ್ತೊಮ್ಮೆ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಡಿಎಂಕೆಗೆ ಮತದಾರ ಪ್ರಭು ಕೈಕೊಟ್ಟಂತಿದೆ.
ಏಕೆಂದರೆ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆಯಲ್ಲಿ ಮೂರು ಗಂಟೆ ಕಳೆದ ನಂತರ ಟಿವಿಕೆ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಬೆಳಗ್ಗೆ 11 ಗಂಟೆ ಸಮಯಕ್ಕೆ ಟಿವಿಕೆ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ರಾಜ್ಯದ ದೊಡ್ಡ ಪಕ್ಷವಾಗಿ ಹೊರಹೊಮ್ಮುವತ್ತ ಹೆಜ್ಜೆ ಇಟ್ಟಿದ್ದರೆ, ಎಐಎಡಿಎಂಕೆ 74 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಹಾಗೂ ಡಿಎಂಕೆ ಕೇವಲ 52 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಒಟ್ಟು 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 118 ಕ್ಷೇತ್ರಗಳನ್ನು ಗೆಲ್ಲಬೇಕಿದ್ದು, ಸದ್ಯದ ಅಂಕಿಅಂಶ ಗಮನಿಸಿದರೆ ಟಿವಿಕೆ ಗೆಲುವಿಗೆ ಸಮೀಪವಿದೆ. ಇನ್ನು ಆಡಳಿತಾರೂಢ ಡಿಎಂಕೆ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದು, ಈ ಬಾರಿ ಹೀನಾಯ ಸೋಲನುಭವಿಸುವತ್ತ ಸಾಗಿದೆ.
ಪಕ್ಷದ ಈ ಕಳಪೆ ಪ್ರದರ್ಶನ ಕಂಡು ಡಿಎಂಕೆ ಬೆಂಬಲಿಗರು ಭಾರೀ ನಿರಾಸೆಗೊಳಗಾಗಿದ್ದು, ಕಾರ್ಯಕರ್ತನೊಬ್ಬ ನಡು ರಸ್ತೆಯಲ್ಲಿಯೇ ಕಣ್ಣೀರಿಟ್ಟಿದ್ದಾನೆ. ಆರಂಭದಿಂದಲೂ ಟಿವಿಕೆ ಮುನ್ನಡೆ ಕಾಯ್ದುಕೊಂಡಿರುವುದನ್ನು ಕಂಡು ಕಣ್ಣೀರು ಹಾಕುತ್ತಾ ಮಾತನಾಡಿರುವ ಈತ ತಮ್ಮ ನಾಯಕರು ಉತ್ತಮ ಕೆಲಸವನ್ನು ಮಾಡಿದ್ದು, ಮಧ್ಯಾಹ್ನದ ಬಳಿಕ ಡಿಎಂಕೆ ಒಳ್ಳೆಯ ಲೀಡ್ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದ್ದಾನೆ.

