ನವದೆಹಲಿ: ಇಡೀ ದೇಶವೇ ಕುತೂಹಲದಿಂದ ನೋಡುತ್ತಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಎಲ್ಲಾ ರಾಜ್ಯಗಳಲ್ಲಿಯೂ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಹಿನ್ನಡೆಯಲ್ಲಿದ್ದು, ಬಿಜೆಪಿ ಭಾರಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದತ್ತ ದಾಪುಗಾಲಿಟ್ಟಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದೆ. 169 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಂಗಾಳದಲ್ಲಿ 15 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಮಮತಾ ಬ್ಯಾನರ್ಜಿ ಅವರ ಆಳ್ವಿಕೆ ಈಬಾರಿ ಅಂತ್ಯವಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಈ ಬಾರಿ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಬಹುತೇಕ ದಟ್ಟವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಬೇಕೆಂಬುದು ಬಿಜೆಪಿಯ ಬಹುದಿನಗಳ ಕನಸಾಗಿತ್ತು. ಈ ಬಾರಿ ಬಿಜೆಪಿ ಕನಸು ನನಸಾಗುವ ಲಕ್ಷಣಗಳು ಕಂಡುಬರುತ್ತಿವೆ. ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಕೋಲ್ಕತ್ತಾ ಸೇರಿದಂತೆ ಹಲವು ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದ್ದು, ಪರ್ಧಾನಿ ನರೇಂದ್ರ ಮೋದಿ ಇಂದು ಸಂಜೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಸಂಜೆ ಪ್ರಧಾನಿ ಮೋದಿ ನವದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದು, ಸಂಜೆ 6:30ಕ್ಕೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

