ಬೆಂಗಳೂರು : ಇಂದು ಜೂನ್ 3, 2026ರಂದು ನಡೆಯಲಿರುವ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭದ ಹಿನ್ನೆಲೆಯಲ್ಲಿ, ಭದ್ರತಾ ದೃಷ್ಟಿಯಿಂದ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಪ್ರಮಾಣ ವಚನ ಕಾರ್ಯಕ್ರಮವು ಮಧ್ಯಾಹ್ನ 4.05ಕ್ಕೆ ಲೋಕಭವನದಲ್ಲಿ ನಡೆಯಲಿದ್ದು, ಭಾರಿ ಜನಸಂದಣಿ ಮತ್ತು ಸಂಚಾರ ದಟ್ಟಣೆ ಉಂಟಾಗುವ ನಿರೀಕ್ಷೆಯಿದೆ. ಈ ಕಾರಣದಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮಧ್ಯಾಹ್ನದಿಂದ ರಜೆ ನೀಡಲಾಗಿದೆ.
ಅಧಿಕೃತ ಆದೇಶ: ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ತುರ್ತು ಕಾರ್ಯಗಳನ್ನು ಹೊರತುಪಡಿಸಿ ಉಳಿದವರಿಗೆ ಈ ರಜೆ ಅನ್ವಯವಾಗಲಿದೆ.
ಏನಿದೆ ಆದೇಶದಲ್ಲಿ..?
ಕರ್ನಾಟಕ ಸರ್ಕಾರದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು 2026ರ ಜೂನ್ 3ರಂದು ಅಪರಾಹ್ನ 4.05 ಗಂಟೆಗೆ ಕರ್ನಾಟಕ ಲೋಕಭವನದಲ್ಲಿ ನಿಗದಿಯಾಗಿದೆ.ಈ ಹಿನ್ನೆಲೆಯಲ್ಲಿ, ಲೋಕಭವನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ ಹಾಗೂ ವಾಹನ ಸಂಚಾರ ದಟ್ಟಣೆ ಉಂಟಾಗಬಹುದು. ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ, ಜೂನ್ 3, 2026ರ ಅಪರಾಹ್ನ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಜೆಯನ್ನು ಘೋಷಿಸಲಾಗಿದೆ. ಈ ಆದೇಶವನ್ನು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಕಾರ್ಯಕಾರಿ) ಯಾದುಕುವಾರ್ ಆರ್. ಅವರು ಡಿಜಿಟಲ್ ಸಹಿಯೊಂದಿಗೆ ಹೊರಡಿಸಿದ್ದಾರೆ.


