ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಹಲವು ದಿನಗಳಿಂದ ವದಂತಿ, ಊಹಾಪೋಹದಂತಿದ್ದ ಅಧಿಕಾರ ಹಂಚಿಕೆ ವಿಚಾರ ಜಾರಿಗೆ ಬಂದಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಖಾತರಿಯಾಗಿದೆ.
ನಿನ್ನೆ ( ಮೇ 30 ) ನಡೆದ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್‌ನ ಶಾಸಕರು ಡಿಕೆ ಶಿವಕುಮಾರ್ ಅವರನ್ನು ತಮ್ಮ ಪಕ್ಷದ ನಾಯಕ ಎಂದು ಆಯ್ಕೆ ಮಾಡಿದ್ದು, ಮೇ 3ರಂದು ಡಿಕೆಶಿ ಪಟ್ಟಾಭಿಷೇಕ ನಡೆಯಲಿದೆ.
ಇನ್ನು ಈ ಮಹತ್ವದ ಬೆಳವಣಿಗೆ ಕುರಿತು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿದ್ದು, ಡಿಕೆ ಶಿವಕುಮಾರ್ ಮಾತ್ರವಲ್ಲ ಕಾಂಗ್ರೆಸ್‌ನ ಯಾರಿಗೂ ಸಿಎಂ ಆಗುವ ಅರ್ಹತೆ ಇಲ್ಲ ಎಂದಿದ್ದಾರೆ. ‘ಡಿಕೆ ಶಿವಕುಮಾರ್ ಅವರ ಆಲೋಚನೆಗಳನ್ನು ನೋಡಿಕೊಂಡು ಬರುತ್ತಿದ್ದೇವೆ. ಇನ್ನೂ ಅವರು ಸಿಎಂ ಆಗಿಲ್ಲ, ಅದೇನಾಗುತ್ತೋ ನೋಡಬೇಕು. ನನಗೆ ಡಿಕೆ ಶಿವಕುಮಾರ್ ಅವರು ಮಾತ್ರವಲ್ಲ, ಯಾರು ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳಿದ್ದಾರೋ ಅವರಲ್ಲಿ ದೂರದೃಷ್ಟಿ ಕಾಣಿಸುತ್ತಿಲ್ಲ. ಅವರು ಕರ್ನಾಟಕವನ್ನು ಬಲಿಷ್ಠ ಮಾಡುತ್ತಾರೆ ಎನ್ನುವುದು ನನಗೆ ಕಾಣಿಸುತ್ತಿಲ್ಲ. ಡಿಕೆಶಿ ಅವರು ಬಿಡದಿ ಟೌನ್‌ಶಿಪ್ ಮಾಡಲು ರೈತರ 9600 ಎಕರೆಯನ್ನು ಕಬಳಿಸಿ ಕಾಂಕ್ರೀಟ್ ಮಾಡಬೇಕು ಎನ್ನುವುದನ್ನು ನಾವು ಒಪ್ಪಲ್ಲ. ಸಾವಿರಾರು ಕೋಟಿಯ ಮೇಕೆದಾಟು ಮಾಡಿ ಅರಣ್ಯ ನಾಶ ಮಾಡುವುದನ್ನು ನಾವು ಒಪ್ಪಲ್ಲ. ಬೆಂಗಳೂರನ್ನು ನಾಶ ಮಾಡಿದ್ದು ಮಾತ್ರವಲ್ಲದೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಹಳೆ ಮೈಸೂರನ್ನು ಕಡೆಗಣಿಸುತ್ತಿರುವುದನ್ನು ನಾವು ಒಪ್ಪಲಾಗಲ್ಲ. ಅವರು ಸಿಎಂ ಆದರೆ ರಾಜ್ಯಕ್ಕೆ ಸಮಸ್ಯೆಯಾಗುವ ಸಾಧ್ಯತೆಗಳಿವೆ’ ಎಂದರು.

