ಹಿಮೋಫಿಲಿಯಾ ರೋಗಿಗಳ ನೋವಿಗೆ ಸ್ಪಂದಿಸುವ ಸರ್ಕಾರದ ‘ಕುಸುಮ ಸಂಜೀವಿನಿ’ ಯೋಜನೆಯಡಿ ಅತ್ಯಾಧುನಿಕ ರೋಗ ನಿರೋಧಕ ಚಿಕಿತ್ಸೆ ಹಾಗೂ ಉಚಿತ 108 ಅಂಬ್ಯುಲೆನ್ಸ್ ಸೇವೆಗಳನ್ನು ಇಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗಿದೆ.
ಬೆಂಗಳೂರಿನ ನೆಹರು ತಾರಾಲಯದ ಯು.ಆರ್. ರಾವ್ ಭವನದ ಸಿ.ವಿ. ವಿಶ್ವೇಶ್ವರ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.
ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಉಪ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, “ಅಪರೂಪದ ಹಿಮೋಫಿಲಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ದೊಡ್ಡವರು ಯಾರೂ ಕೂಡ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಹಿಮೋಫಿಲಿಯಾದಿಂದ ಬಳಲುತ್ತಿರುವವರ ಬದುಕಿಗೆ ನಮ್ಮ ಸರ್ಕಾರ ಹೊಸ ಶಕ್ತಿ ತುಂಬಿ ಎಲ್ಲರಂತೆ ಬದುಕುವ ಭರವಸೆ ಒದಗಿಸುತ್ತದೆ” ಎಂದರು.
‘ಅರ್ಹ ರೋಗಿಗಳಿಗೆ ಉಚಿತವಾಗಿ ಈ ನೋವು ರಹಿತವಾದ ಇಂಜೆಕ್ಷನ್ ನೀಡಲು ಮುಖ್ಯಮಂತ್ರಿಗಳು ದೊಡ್ಡ ಮನಸ್ಸು ಮಾಡಿ ಅಗತ್ಯವಾಗಿ 45 ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ಈ ಯೋಜನೆ ಸಾವಿರಾರು ರೋಗಿಗಳ ಬದುಕಿನಲ್ಲಿ ನೆಮ್ಮದಿ ತರಲಿದೆ. ಹಾಗಾಗಿ ಶ್ರೀ ಸಿದ್ದರಾಮಯ್ಯ ಅವರಿಗೆ ನಾನು ಕೃತಜ್ಞತೆ ಸಲ್ಲಿಸಿದ್ದೇನೆ” ಎಂದು ಹೇಳಿದರು.
ಈ ಯೋಜನೆಯಡಿ ಹಿಮೋಫಿಲಿಯಾದಿಂದ ಬಳಲುತ್ತಿರುವ ಪ್ರತಿ ರೋಗಿಗೂ ಸುಮಾರು 05 ಲಕ್ಷ ರೂಪಾಯಿ ವೆಚ್ಚದಲ್ಲಿ ದುಬಾರಿಯಾದ ‘ಸಬ್‌ಕ್ಯುಟೇನಿಯಸ್’ ಚುಚ್ಚುಮದ್ದು ಚಿಕಿತ್ಸೆಯನ್ನು ನೀಡಲು ಮುತುವರ್ಜಿ ವಹಿಸಿದ್ದೇವೆ. ಪ್ರಸ್ತುತ 2600 ಕ್ಕೂ ಹೆಚ್ಚು ಹಿಮೋಫಿಲಿಯಾ ರೋಗಿಗಳನ್ನು ಪತ್ತೆಹಚ್ಚಿದ್ದು, ಈಗಾಗಲೇ 200 ರೋಗಿಗಳಿಗೆ ಈ ಇಂಜೆಕ್ಷನ್‌ಅನ್ನು ನೀಡಿ ಪರಿಕ್ಷಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಚಿಕಿತ್ಸೆಗಾಗಿ ಮೊದಲ ಹಂತದಲ್ಲಿ ಒಟ್ಟು 17 ಕೋಟಿ ರೂ. ಅನುದಾನವನ್ನು ಚಿಕಿತ್ಸೆಗಾಗಿ ಮೀಸಲಿಟ್ಟಿದ್ದೇವೆ. ಮಾತ್ರವಲ್ಲ, ಈ ಯೋಜನೆಗೆ ಇನ್ನೂ ಹೆಚ್ಚುವರಿ ಅನುದಾನದ ಅಗತ್ಯವಿದ್ದರೂ ಒದಗಿಸಲು ಬದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಹಿಮೋಫಿಲಿಯಾ ‘ಎ’ ನಿಂದ ಬಳಲುತ್ತಿರುವ ರೋಗಿಗಳಿಗೆ ಈ ಮೊದಲು ನೀಡಲಾಗುತ್ತಿದ್ದ ನೋವಿನ ಇಂಜೆಕ್ಷನ್‌ಗಳ ಬದಲಿಗೆ, ಈಗ ತಿಂಗಳಿಗೊಮ್ಮೆ ನೀಡುವ ಸುಧಾರಿತ ಚಿಕಿತ್ಸೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿರುವುದರ ಜೊತೆಗೆ, ತುರ್ತು ಸಮಯದಲ್ಲಿ ರೋಗಿಗಳ ಮನೆ ಬಾಗಿಲಿಗೇ 108 ಅಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದ್ದು, ರಕ್ತಸ್ರಾವ ಮುಕ್ತ (Zero Bleeds) ಮತ್ತು ಅಂಗವೈಕಲ್ಯ ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೇವೆ. ಹೀಗೆ ಜೀವ ಉಳಿಸುವ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದಾಗ ನಮ್ಮ ಬದುಕು ಕೂಡ ಸಾರ್ಥಕ ಎನಿಸುತ್ತದೆ ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.

