ಬೆಂಗಳೂರು: ಸಂದೇಶಗಳು, ನಿರಂತರ ಜೂಮ್ ಕರೆಗಳು, ರಾತ್ರಿಯಿಡೀ ಇಮೇಲ್‌ಗಳ ಪರಿಶೀಲನೆ ಹಾಗೂ ಒಟಿಟಿ ಸಿನಿಮಾಗಳ ನಿರಂತರ ವೀಕ್ಷಣೆ ಇಂದು ನಮ್ಮ ದೈನಂದಿನ ಜೀವನದ ಭಾಗವಾಗಿವೆ. ಆದರೆ, ಮುಂಜಾನೆಯಿಂದ ರಾತ್ರಿ ಮಲಗುವವರೆಗೂ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಸ್ಕ್ರೀನ್‌ಗಳಿಗೆ ಕಣ್ಣು ನೆಟ್ಟು ಕುಳಿತುಕೊಳ್ಳುವ ಈ ಅಭ್ಯಾಸವು ಮನುಷ್ಯನ ಮನಸ್ಸು ಮತ್ತು ದೇಹದ ಮೇಲೆ ಭಾರಿ ಪ್ರಮಾಣದ ಒತ್ತಡವನ್ನು ಹೇರುತ್ತಿದೆ.
ಇದನ್ನೇ ಆರೋಗ್ಯ ತಜ್ಞರು ‘ಡಿಜಿಟಲ್ ಬರ್ನ್‌ಔಟ್’ (Digital Burnout) ಎಂದು ಕರೆಯುತ್ತಾರೆ. ದೀರ್ಘಕಾಲದ ಸ್ಕ್ರೀನ್ ಬಳಕೆಯಿಂದ ಎದುರಾಗುವ ಈ ಮಾನಸಿಕ ಹಾಗೂ ದೈಹಿಕ ಬಳಲಿಕೆಯನ್ನು ಆರಂಭದಲ್ಲೇ ಗುರುತಿಸದೇ ಹೋದರೆ, ಅದು ವ್ಯಕ್ತಿಯ ಮನಸ್ಥಿತಿ, ಕಾರ್ಯಕ್ಷಮತೆ ಮತ್ತು ಕುಟುಂಬದ ಸಂಬಂಧಗಳನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತದೆ.
ಡಿಜಿಟಲ್ ಬರ್ನ್‌ಔಟ್‌ನ ಲಕ್ಷಣಗಳು ಯಾವುವು?
ಡಿಜಿಟಲ್ ಆಯಾಸವು ಒಮ್ಮೆಲೇ ಕಾಣಿಸಿಕೊಳ್ಳುವುದಿಲ್ಲ. ದೈನಂದಿನ ಸಣ್ಣಪುಟ್ಟ ಬದಲಾವಣೆಗಳ ಮೂಲಕವೇ ಇದು ಪ್ರಕಟವಾಗುತ್ತದೆ:
ಮಾನಸಿಕ ಲಕ್ಷಣಗಳು: ಸದಾ ಆತಂಕ, ಹತಾಶೆ, ಶೂನ್ಯತೆಯ ಭಾವನೆ, ಕಿರಿಕಿರಿ ಹಾಗೂ ಸಣ್ಣ ವಿಷಯಗಳಿಗೂ ಮರೆವು ಉಂಟಾಗುವುದು.
ದೈಹಿಕ ತೊಂದರೆಗಳು: ನಿರಂತರ ಸ್ಕ್ರೀನ್ ನೋಡುವಿಕೆಯಿಂದ ಕಣ್ಣು ಉರಿಯುವುದು, ದೃಷ್ಟಿ ಮಂದವಾಗುವುದು, ತಲೆನೋವು, ದೇಹದಲ್ಲಿ ಆಲಸ್ಯ ಹಾಗೂ ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು. (ಕ್ಲೀವ್‌ಲ್ಯಾಂಡ್ ಕ್ಲಿನಿಕ್ ವರದಿಯ ಪ್ರಕಾರ, ಗಂಟೆಗಟ್ಟಲೆ ಪರದೆಗೆ ಒಡ್ಡಿಕೊಳ್ಳುವುದು ಕಣ್ಣಿನ ದೃಷ್ಟಿ ಮತ್ತು ಶಕ್ತಿಯನ್ನು ಕುಗ್ಗಿಸುತ್ತದೆ).
ಸಾಮಾಜಿಕ ದೂರ: ಪ್ರೀತಿಪಾತ್ರರು ಹಾಗೂ ಕುಟುಂಬದವರೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿರುವುದು, ನಿಜ ಜೀವನದ ಸಂಬಂಧಗಳಿಂದ ದೂರ ಸರಿಯುವುದು.
ಡಿಜಿಟಲ್ ಬರ್ನ್‌ಔಟ್‌ನಿಂದ ಹೊರಬರುವುದು ಹೇಗೆ?
ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಜೀವನಶೈಲಿಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ:
ಆರೋಗ್ಯಕರ ಗಡಿಗಳನ್ನು ನಿರ್ಮಿಸಿ: ಮಲಗುವ ಕೋಣೆ ಹಾಗೂ ಊಟದ ಟೇಬಲ್ ಮೇಲೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ. ಮಲಗುವ 1-2 ಗಂಟೆಗಳ ಮುಂಚೆಯೇ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪಕ್ಕಕ್ಕಿಡುವ ಅಭ್ಯಾಸ ಬೆಳೆಸಿಕೊಳ್ಳಿ.
ಸಾಮಾಜಿಕ ಮಾಧ್ಯಮ ಬಳಕೆ ಕಡಿತಗೊಳಿಸಿ: ಅತಿಯಾದ ಸ್ಕ್ರೋಲಿಂಗ್ ಮನಸ್ಸಿನ ಆತಂಕವನ್ನು ಹೆಚ್ಚಿಸುತ್ತದೆ. ನಿಮ್ಮಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಹುಟ್ಟುಹಾಕುವ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಮ್ಯೂಟ್ ಮಾಡಿ ಅಥವಾ ಅನ್‌ಫಾಲೋ ಮಾಡಿ.
‘ಡಿಜಿಟಲ್ ಡಿಟಾಕ್ಸ್’ ಅಳವಡಿಸಿ: ವಾರದಲ್ಲಿ ಕನಿಷ್ಠ ಒಂದು ದಿನ ಅಥವಾ ಕೆಲವು ಗಂಟೆಗಳ ಕಾಲ ಫೋನ್, ಲ್ಯಾಪ್‌ಟಾಪ್‌ಗಳಿಂದ ಸಂಪೂರ್ಣವಾಗಿ ದೂರವಿದ್ದು, ನಿಜ ಜೀವನದ ಸನ್ನಿವೇಶಗಳಿಗೆ ಆದ್ಯತೆ ನೀಡಿ. ಇದು ನರಮಂಡಲಕ್ಕೆ ವಿಶ್ರಾಂತಿ ನೀಡುತ್ತದೆ.
ಆಫ್‌ಲೈನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ಪಾರ್ಕ್‌ನಲ್ಲಿ ವಾಕಿಂಗ್ ಮಾಡುವುದು, ಒಗಟುಗಳನ್ನು ಬಿಡಿಸುವುದು, ಸ್ನೇಹಿತರೊಂದಿಗೆ ನೇರವಾಗಿ ಮಾತನಾಡುವುದು ಅಥವಾ ಸಣ್ಣಪುಟ್ಟ ಹೂದೋಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸಿಗೆ ನಿಜವಾದ ಸಂತೋಷ ತರುತ್ತದೆ.
ಜಾಗೃತ ಚಿಂತನೆ: ಯಾವುದೇ ಡಿಜಿಟಲ್ ಸಾಧನವನ್ನು ಕೈಗೆತ್ತಿಕೊಳ್ಳುವ ಮೊದಲು, “ಇದು ಈಗ ನಿಜವಾಗಿಯೂ ಅಗತ್ಯವೇ?” ಎಂದು ನಿಮಗ ನೀವೇ ಪ್ರಶ್ನಿಸಿಕೊಳ್ಳಿ. ಇದು ಅನಗತ್ಯ ಸ್ಕ್ರೋಲಿಂಗ್ ತಪ್ಪಿಸುತ್ತದೆ.

