ಹಾಸನ: ಮಹಾಶಿವರಾತ್ರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಸಾಗಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯುವವರ ಸಂಖ್ಯೆ ಹೆಚ್ಚು. ಹೀಗೆ ಪಾದಯತರೆ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಭಕ್ತರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 50 ವರ್ಷದ ಕೃಷ್ಣ ಹೃದಯಾಘಾತಕ್ಕೆ ಬಲಿಯಾದವರು. ಹಾಸನದ ಜಕ್ಕೇನಹಳ್ಳಿ ಗ್ರಾಮದವರು. ಕೃಷ್ಣ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುತ್ತಿದ್ದರು. ಅವರ ಅಳಿಯ ದಿನೇಶ್ ಎಂಬುವವರು ಹಿಂದೇಯೇ ಸಾಗಿದ್ದರು. ಆದರೆ ಅಳಿಯನಿಗಿಂತ ಮುಂದೆ ಸಾಗಿದ್ದ ಕೃಷ್ಣ ಅವರು ಚೀಕನಹಳ್ಳಿ ಗ್ರಾಮದ ಆಟೋ ಸ್ಟ್ಯಾಂಡ್ ನಲ್ಲಿ ಅಳಿಯಬರುವವರೆಗೂ ವಿಶ್ರಾಂತಿ ಪಡೆಯೋಣವೆಂದು ಅಲ್ಲಿಯೇ ಮಲಗಿದ್ದರು.
ಅಳಿಯ ದಿನೇಶ್ ಆಟೋ ನಿಲ್ದಾಣಕ್ಕೆ ಬಂದು ಮಾವನನ್ನು ಎಬ್ಬಿಸಿದರೆ ಮಾವ ಮೇಲೆ ಏಳಲಿಲ್ಲ. ಕರೆದರೂ ಎಚ್ಚರಗೊಂಡಿಲ್ಲ. ಮಲಗಿದ್ದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ತಕ್ಷಣ ಆಟೋದಲ್ಲಿ ಬೇಲೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

