ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನ ದೋಚಿ ಪರಾರಿಯಾಗಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ಅಹಮದ್, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ, ಲತೀಪ್ ಬಂಧಿತ ಆರೋಪಿಗಳು. ಬಂಧಿತರಿಂದ ಹಣವನ್ನು ಜಪ್ತಿ ಮಾಡಲಾಗಿದೆ. 12 ಆರೋಪಿಗಳ ಪೈಕಿ 9 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಶಂಕರಪ್ಪ ಎಂಬುವವರಿಗೆ ಹಣ ತ್ರಿಬಲ್ ಮಾಡಿಕೊಡುವುದಾಗಿ ಹೇಳಿ ಆರೋಪಿ ಕೃಷ್ಣ ಕುಮಾರ್ ಫೋನ್ ಮಾಡಿ ಕರೆಸಿಕೊಂಡಿದ್ದ. ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದಂತೆ ಕೃಷ್ಣ ಕುಮಾರ್ ಸಹಚರರು ಭ್ರಷ್ಟಾಚಾರ ನಿಗ್ರಹ ದಳ ಹೆಸರಿನಲ್ಲಿ ಖಾಸಗಿ ಕಾರ್ಗೆ ಬೋರ್ಡ್ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಎಸ್ಕೇಪ್ ಆಗಿದ್ದರು.
ಹಣ ದೋಚಿದ ಬಳಿಕ ಆರೋಪಿ ಕೃಷ್ಣಕುಮಾರ್ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆ ಪೊಲೀಸರು 9 ಆರೋಪಿಗಳನ್ನ ಬಂಧಿಸಿದ್ದಾರೆ.

