ಬೆಂಗಳೂರು ನಗರದ ಜನರಿಗೆ ಗುಡ್ ನ್ಯೂಸ್ ಇದೆ. ದೀಪಾಂಜಲಿನಗರ ಮತ್ತು ಪಿಇಎಸ್ ಕಾಲೇಜು ಸಂಪರ್ಕಿಸುವ ನೈಸ್ ಲಿಂಕ್ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ.
ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. 1.5 ಕಿ.ಮೀ.ಉದ್ದದ ಹೊಸ ಲಿಂಕ್ ರಸ್ತೆ ಇದಾಗಿದೆ. ಈ ರಸ್ತೆಯಿಂದ ಮೈಸೂರು ರಸ್ತೆ ಸಂಚಾರ ದಟ್ಟಣೆಯಲ್ಲಿ ಸಿಲುಕದೇ ನೇರವಾಗಿ ಪಿಇಎಸ್ ಕಾಲೇಜು ಬಳಿ ಬಂದು ಸೇರಬಹುದು.
ರಸ್ತೆಯ ವಿಡಿಯೋವನ್ನು ಪೋಸ್ಟ್ ಮಾಡಿರುವ ಅಶೋಕ್ ಖೇಣಿ, ‘ಸಂತೋಷದ ಸುದ್ದಿ, ಬೆಂಗಳೂರು ಜನತೆಯೇ! ನಿಮ್ಮ ಸುದೀರ್ಘ ಕಾಯುವಿಕೆ ಕೊನೆಗೂ ಮುಗಿಯಲಿದೆ’ ಎಂದು ಹೇಳಿದ್ದಾರೆ.
‘ನಮ್ಮ ನಗರದ ಅತ್ಯಂತ ಸುಂದರವಾದ ಮತ್ತು ಸುಸಜ್ಜಿತವಾದ ನೈಸ್ (NICE) ರಸ್ತೆಗಳಲ್ಲಿ ಒಂದಾದ ಹೊಸ ಮಾರ್ಗವು ಶೀಘ್ರದಲ್ಲೇ ನಿಮ್ಮ ಸೇವೆಗೆ ಮುಕ್ತವಾಗಲಿದೆ. ದೀಪಾಂಜಲಿನಗರ ಜಂಕ್ಷನ್‌ನಿಂದ ನೈಸ್ ಎಕ್ಸ್‌ಪ್ರೆಸ್‌ವೇಗೆ (NICE Expressway) ಸಂಪರ್ಕ ಕಲ್ಪಿಸುವ ಈ ಹೊಸ ರಸ್ತೆಯು ನಿಮ್ಮ ಪ್ರಯಾಣವನ್ನು ಹೆಚ್ಚು ಸುಗಮ ಮತ್ತು ವೇಗವಾಗಿಸಲಿದೆ’ ಎಂದು ತಿಳಿಸಿದ್ದಾರೆ.
ಈ ಲಿಂಕ್ ರಸ್ತೆ 1.5 ಕಿ.ಮೀ. ಉದ್ದವಿದೆ. ರಸ್ತೆಯು ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿ ಬಳಿಯ ಪಿಇಎಸ್ ಕಾಲೇಜಿನ ಹತ್ತಿರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದರಿಂದಾಗಿ ಮೈಸೂರು ರಸ್ತೆಯ ಸಂಚಾದ ದಟ್ಟಣೆಗೆ ಪರಿಹಾರ ಸಿಗಲಿದೆ.
ರಸ್ತೆ ನಿರ್ಮಾಣ ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಈ ರಸ್ತೆ ನೇರವಾಗಿ ನೈಸ್ ರೋಡ್‌ಗೆ ಸಂಪರ್ಕ ಕಲ್ಪಿಸಲಿದ್ದು ನಾಯಂಡಹಳ್ಳಿಗೆ ಬರುವುದನ್ನು ತಪ್ಪಿಸಲಿದೆ.
ಈ ಲಿಂಕ್ ರಸ್ತೆ ಸಂಚಾರಕ್ಕೆ ಮುಕ್ತವಾದರೆ ಹೊಸೂರು, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಗೆ ಸಂಚಾರ ನಡೆಸುವ ವಾಹನಗಳಿಗೆ ಬಿಗ್ ರಿಲೀಫ್ ಸಿಗಲಿದೆ. ದೀಪಾಲಂಜಲಿ ನಗರ ಜಂಕ್ಷನ್ ಬಳಿಯೂ ವಾಹನಗಳ ದಟ್ಟಣೆ ತಪ್ಪಲಿದೆ.
ಲಿಂಕ್ ರಸ್ತೆ ದೀಪಾಂಜಲಿ ನಗರ-ನೈಸ್ ರಸ್ತೆಗೆ ನೇರ ಸಂಪರ್ಕ ಕಲ್ಪಿಸಲಿದ್ದು ಪ್ರಯಾಣಿಕರಿಗೆ 15 ರಿಂದ 20 ನಿಮಿಷ ಸಮಯ ಉಳಿತಾಯವಾಗಲಿದೆ.

