ಬೆಂಗಳೂರು: ‘ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರೂ.ಗಳ ವೇತನ ನೀಡಬೇಕು.’
ಹೀಗೆಂದು ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಮಂಗಳವಾರ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಆಕ್ಷೇತ್ರದ ನಡುವಿನ ವಿರುದ್ಧ ನಿರ್ಣಯ ಮಂಡಿಸಿ ಸಿಎಂ ಮಾತನಾಡಿದರು.
2008 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮನರೇಗಾ ಅಡಿ 31.54 ಲಕ್ಷ ಕುಟುಂಬಗಳಿಗೆ ಕೆಲಸ ಒದಗಿಸಲಾಗಿದೆ. 13.24 ಕೋಟಿ ಮಾನವ ದಿನಗಳ ಸೃಜನೆಯಾಗಿದ್ದು, ದುಡಿಯೋಣ ಬಾ, ಕೃಷಿ ಹೊಂಡ ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಲಾಗಿತ್ತು. ಬಸವರಾಜ ಬೊಮ್ಮಾಯಿ ಯವರು ಕೂಡ ಮನರೇಗಾ ಯೋಜನೆಗೆ ಹೆಚ್ಚಿನ ಒತ್ತು ನೀಡಿರುವ ಬಗ್ಗೆ ಹೇಳಿದ್ದು, ಈಗ ಇದ್ದಕ್ಕಿಂದ್ದಂತೆ ರದ್ದು ಮಾಡಲಾಗಿದೆ ಎಂದರು.
ವಿಬಿ ಜಿ ರಾಮ್ ಜಿ ಯೋಜನೆಯಿಂದ ಉದ್ಯೋಗವಿಲ್ಲದೆ ಗ್ರಾಮೀಣ ಜನರು ಈಗ ವಲಸೆ ಹೋಗಲು ಪ್ರಾರಂಭಿಸಿದ್ದು, ಗ್ರಾಮೀಣ ಜನರ ಬದುಕನ್ನು ಕಸಿದುಕೊಳ್ಳುವ ಕೆಲಸವಾಗಿದೆ. ಸಾಂವಿಧಾನಿಕ ಹಕ್ಕನ್ನು ಗ್ರಾಮೀಣ ಜನರಿಂದ ಕಸಿದುಕೊಳ್ಳಲಾಗಿದೆ. ಕಾಯ್ದೆ ಜಾರಿಗೆ ತರುವ ಮುನ್ನ ರಾಜ್ಯಗಳೊಂದಿಗೆ ಚರ್ಚೆಯಾಗಿಲ್ಲ. 60: 40 ಅನುದಾನದ ಅನುಪಾತ ತರುವ ಮುನ್ನ ಚರ್ಚೆಯಾಗಬೇಕಿತ್ತು ಎಂದರು.
ಮಹಿಳೆಯರು, ಸಣ್ಣ ರೈತರು, ಆದಿವಾಸಿಗಳಿಗೆ ಆರ್ಥಿಕವಾಗಿ ಶಕ್ತಿ ಬರಬಾರದು ಎಂದು ಮನಸ್ಮೃತಿ ಹೇಳುತ್ತದೆ. ಮನುಸ್ಮೃತಿ ಪ್ರಕಾರ ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಸೇವಕರಾಗಿ ಉಳಿಯುವುದಿಲ್ಲ. ಅದನ್ನೇ ಈಗ ಪಾಲಿಸಲಾಗುತ್ತಿದೆ.
ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರೂ.ಗಳ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದರು.
ಮಹಾತ್ಮ ಗಾಂಧಿ ಹೆಸರು ತೆಗೆದುಹಾಕಿ ಅವರಿಗೆ ಪುನಃ ಅವಮಾನ ಮಾಡಬಾರದು. ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಈ ಮನವಿಯನ್ನು ಕಳುಹಿಸಿಕೊಡಲಾಗುವುದು ಎಂದರು.

