ಪಶ್ಚಿಮ ದೆಹಲಿಯ ಸರ್ಕಾರಿ ಆಸ್ಪತ್ರೆಯೊಂದರಿಂದ ಅಪಹರಣಕ್ಕೊಳಗಾಗಿದ್ದ ಮೂರು ವರ್ಷದ ಗಂಡು ಮಗುವನ್ನು ದೆಹಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬರೋಬ್ಬರಿ 1,000 ಕಿಲೋಮೀಟರ್ ದೂರದ ಬಿಹಾರದಲ್ಲಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗುವನ್ನು ಅಪಹರಿಸಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಆಕೆ ಬಿಚ್ಚಿಟ್ಟ ರಹಸ್ಯ ಕೇಳಿ ಪೊಲೀಸರೇ ದಂಗಾಗಿದ್ದಾರೆ.
ಆಸ್ಪತ್ರೆಯಲ್ಲಿ ಆಟವಾಡುತ್ತಿದ್ದ ಕಂದಮ್ಮ ನಾಪತ್ತೆ ಆಗಸ್ಟ್ 27 ರಂದು ಸಂತ್ರಸ್ತ ಮಹಿಳೆಯೊಬ್ಬರು ಔಷಧ ಪಡೆಯಲು ಪಶ್ಚಿಮ ದೆಹಲಿಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ತಾಯಿ ಸಾಲಿನಲ್ಲಿ ನಿಂತಿದ್ದ ವೇಳೆ, ಮಗು ಆಕೆಯ ಸಮೀಪದಲ್ಲೇ ಆಟವಾಡುತ್ತಿತ್ತು. ಔಷಧ ಪಡೆದು ಹಿಂದಿರುಗಿ ನೋಡುವಷ್ಟರಲ್ಲಿ ಮಗು ನಾಪತ್ತೆಯಾಗಿತ್ತು. ಗಾಬರಿಗೊಂಡ ಪೋಷಕರು ತಕ್ಷಣ ಖ್ಯಾಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಿಸಿ ಟಿವಿ ಜಾಡು ಹಿಡಿದು 1,000 ಕಿ.ಮೀ ಬೆನ್ನಟ್ಟಿದ ಖಾಕಿ ಪಡೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆ ಮತ್ತು ಸುತ್ತಮುತ್ತಲಿನ ನೂರಾರು ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಆಕೆ ಇ-ರಿಕ್ಷಾ ಮೂಲಕ ಮಾದಿಪುರ ಗ್ರಾಮದತ್ತ ಸಾಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಯಿತು.
ಸ್ಥಳೀಯ ವಿಚಾರಣೆ ಮತ್ತು ತಾಂತ್ರಿಕ ಕಣ್ಗಾವಲು (ಸರ್ವೆಲೆನ್ಸ್) ಸಹಾಯದಿಂದ ಆಕೆ ದೆಹಲಿ ತೊರೆದು ಬಿಹಾರದ ತನ್ನ ಸ್ವಂತ ಊರಿಗೆ ತೆರಳಿರುವುದು ಪತ್ತೆಯಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರ ವಿಶೇಷ ತಂಡ ಬಿಹಾರದ ಮುಂಗೇರ್ ಜಿಲ್ಲೆಯ ಅಸ್ನಾಹಾ ಗ್ರಾಮಕ್ಕೆ ಧಾವಿಸಿ, ಕಂದಮ್ಮನನ್ನು ಸುರಕ್ಷಿತವಾಗಿ ರಕ್ಷಿಸಿ ದೆಹಲಿಗೆ ಕರೆತಂದು ಪೋಷಕರ ಮಡಿಲಿಗೆ ಒಪ್ಪಿಸಿದೆ.
ಅಪಹರಣಕ್ಕೆ ಕಾರಣವೇನು? ಬಂಧಿತ ಮಹಿಳೆಯನ್ನು ಬಿಹಾರದ ಬಂಕಾ ಜಿಲ್ಲೆ ಮೂಲದ ಚುನಾರಿ ದೇವಿ (31) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಆಕೆ, “ನನಗೆ ಈಗಾಗಲೇ ಆರು ಜನ ಹೆಣ್ಣುಮಕ್ಕಳಿದ್ದಾರೆ. ಆರೋಗ್ಯ ಸಮಸ್ಯೆಗಳಿಂದಾಗಿ ಮತ್ತೊಂದು ಮಗುವಿಗೆ ಜನ್ಮ ನೀಡಲು ಸಾಧ್ಯವಾಗುತ್ತಿರಲಿಲ್ಲ. ಗಂಡು ಮಗುವನ್ನು ಸಾಕಿ ಬೆಳೆಸಬೇಕೆಂಬ ಆಸೆಯಿಂದ ಆಸ್ಪತ್ರೆಯಲ್ಲಿದ್ದ ಕಂದಮ್ಮನನ್ನು ಅಪಹರಿಸಿದೆ” ಎಂದು ಒಪ್ಪಿಕೊಂಡಿದ್ದಾಳೆ.
ಮಗುವನ್ನು ಕಳೆದುಕೊಂಡು ಕಂಗಾಲಾಗಿದ್ದ ಪೋಷಕರು, ಕಂದಮ್ಮ ಸುರಕ್ಷಿತವಾಗಿ ಮರಳಿ ಸಿಗುತ್ತಿದ್ದಂತೆ ಕಣ್ಣೀರಿಟ್ಟು ದೆಹಲಿ ಪೊಲೀಸರ ಕಾರ್ಯಕ್ಷಮತೆಗೆ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.

