ನವದೆಹಲಿ: ದೆಹಲಿಯ ಸ್ವರೂಪ್ ನಗರದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆಕೆಯ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿರುವ ಕೃಷಿ ಜಮೀನಿನಲ್ಲಿ ಎಸೆಯಲಾಗಿತ್ತು. ಸೆಪ್ಟೆಂಬರ್ 13ರಂದು ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ 16ರಿಂದ 17 ವರ್ಷದೊಳಗಿನ ಮೂವರು ಅಪ್ರಾಪ್ತರು ಹಾಗೂ ಶಿವಂ ಅಲಿಯಾಸ್ ಸುದಾಮ ಎಂಬಾತ ಸೇರಿದ್ದಾನೆ. ಆರೋಪಿಗಳು ಬಾಲಕಿಗೆ ಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೂಶಕ್ ರಸ್ತೆಯ ಸಮೀಪದ ಕೃಷಿ ಜಮೀನಿನಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಬಗ್ಗೆ ಸೆಪ್ಟೆಂಬರ್ 13ರಂದು ಬೆಳಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಮೃತದೇಹ ಬಹುತೇಕ ಕೊಳೆತ ಸ್ಥಿತಿಯಲ್ಲಿದ್ದ ಕಾರಣ, ಆರಂಭದಲ್ಲಿ ಗುರುತು ಪತ್ತೆ ಹಚ್ಚುವುದು ವಿಧಿವಿಜ್ಞಾನ ತಜ್ಞರಿಗೆ ಕಷ್ಟವಾಗಿತ್ತು.
ಪೊಲೀಸರ ಪ್ರಕಾರ, ಬಾಲಕಿ ಆರೋಪಿಗಳೊಂದಿಗೆ ಟೆಂಪೋದಲ್ಲಿ ತೆರಳಿದ್ದಳು. ಅದಕ್ಕೂ ಮುನ್ನ ಆರೋಪಿಗಳು ಟೆಂಪೋದಲ್ಲೇ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಬಳಿಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹದ ಕೆಲವು ಭಾಗಗಳನ್ನು ಬೀದಿ ನಾಯಿಗಳು ತಿಂದಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಒಂದು ಕೈ ದೇಹದಿಂದ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಹಲವು ದಿನಗಳ ಕಾಲ ಮನೆಯಿಂದ ಹೊರಗೆ ಹೋಗಿ ಮತ್ತೆ ವಾಪಸ್ ಬರುತ್ತಿದ್ದ ಕಾರಣ, ಆಕೆಯ ಕುಟುಂಬದವರು ನಾಪತ್ತೆ ದೂರು ದಾಖಲಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಪೊಲೀಸರು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳ ಸುಳಿವು ಪತ್ತೆಹಚ್ಚಿದ್ದಾರೆ. ಕತ್ತಲೆ ಮತ್ತು ಕಡಿಮೆ ದೃಶ್ಯಮಾನತೆಯಿಂದಾಗಿ ಆರಂಭದಲ್ಲಿ ಟೆಂಪೋದ ನೋಂದಣಿ ಸಂಖ್ಯೆಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಬಳಿಕ ವಾಹನವನ್ನು ಪತ್ತೆಹಚ್ಚಿ ಖಡ್ಡಾ ಕಾಲೋನಿಯಲ್ಲಿ ನಿಲ್ಲಿಸಿರುವುದನ್ನು ಪೊಲೀಸರು ಕಂಡುಹಿಡಿದರು.
ಟೆಂಪೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಮೂವರು ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿತು. ಬಳಿಕ ನಾಲ್ವರನ್ನು ಬಂಧಿಸಲಾಯಿತು.
ಆರೋಪಿಗಳ ಬಳಿಯಿಂದ ಘಟನೆ ವೇಳೆ ಧರಿಸಿದ್ದ ರಕ್ತದ ಕಲೆಗಳಿರುವ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೊಲೆಗೆ ಬಳಸಲಾಗಿದೆ ಎಂದು ಶಂಕಿಸಲಾದ ಎರಡು ಚಾಕುಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.
ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ. ಆರೋಪಿಗಳ ವಿರುದ್ಧ POCSO ಕಾಯ್ದೆಯ ಸೆಕ್ಷನ್ 6 ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

