ಉದ್ಯಮಿ ಮತ್ತು ನಟ ರಾಜ್ ಕುಂದ್ರಾ ತಮ್ಮ ಜೀವನದ ಅತ್ಯಂತ ಕಠಿಣ ದಿನಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಆಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ವಿತರಣೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಇವರು, ಜೈಲಿನಲ್ಲಿ ಅನುಭವಿಸಿದ ನರಕಯಾತನೆ ಹಾಗೂ ಅನುಭವಿಸಿದ ಮಾನಸಿಕ ಘರ್ಷಣೆಯನ್ನು ವಿವರಿಸಿದ್ದಾರೆ.
ಆರ್ಥರ್ ರೋಡ್ ಜೈಲಿನಲ್ಲಿದ್ದ ಸಮಯದಲ್ಲಿ ಹೊರಬಿದ್ದ ಒಂದು ಸುಳ್ಳು ಸುದ್ದಿ ತಮ್ಮನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ಪತ್ನಿ ಶಿಲ್ಪಾ ಶೆಟ್ಟಿ ತಮಗೆ ಡೈವೋರ್ಸ್ ನೀಡಲಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳ ಮೂಲಕ ತಿಳಿದಾಗ, ಜೀವನವೇ ಮುಗಿದುಹೋಯಿತು ಎಂಬ ಭಾವನೆ ಮೂಡಿತ್ತು. ತಮ್ಮ ಇಡೀ ಪ್ರಪಂಚವಾಗಿದ್ದ ಕುಟುಂಬವೇ ದೂರವಾಗುತ್ತಿದೆ ಎಂಬ ಸುದ್ದಿಯಿಂದಾಗಿ ಆ ರಾತ್ರಿ ನಿದ್ರೆಯಿಲ್ಲದೆ ತೀವ್ರ ನಿರಾಶೆಗೆ ಒಳಗಾಗಿ, ಪ್ರಾಣ ಕಳೆದುಕೊಳ್ಳುವ ಆಲೋಚನೆಯೂ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.
ಆದರೆ ಮರುದಿನವೇ ಪತ್ನಿ ಶಿಲ್ಪಾ ಶೆಟ್ಟಿ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದಾಗ, ಈ ಎಲ್ಲಾ ವರದಿಗಳು ಸಂಪೂರ್ಣ ಸುಳ್ಳು ಮತ್ತು ತಾನು ಸದಾ ಬೆಂಬಲವಾಗಿ ನಿಲ್ಲುವುದಾಗಿ ಧೈರ್ಯ ತುಂಬಿದರು. ಇದರಿಂದ ತಮಗೆ ದೊಡ್ಡ ಆಶ್ವಾಸನೆ ಸಿಕ್ಕಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಜೈಲಿನಲ್ಲಿ ಕಳೆದ ದಿನಗಳ ಸ್ಥಿತಿಯ ಬಗ್ಗೆ ಮಾತನಾಡಿದ ಕುಂದ್ರಾ, ಅಲ್ಲಿನ ಆಹಾರ ಸೇವಿಸಲು ಸಾಧ್ಯವಾಗದೆ ಸುಮಾರು ೬೩ ದಿನಗಳ ಕಾಲ ಕೇವಲ ಬಿಸ್ಕತ್ತು ಮತ್ತು ನೀರು ಸೇವಿಸಿ ದಿನ ತಳ್ಳಿದ್ದಾಗಿ ಹೇಳಿದ್ದಾರೆ. ಈ ಅವಧಿಯಲ್ಲಿ ಸುಮಾರು ೧೭ ರಿಂದ ೧೮ ಕೆಜಿಯಷ್ಟು ತೂಕ ಕಡಿಮೆಯಾಯಿತು ಎಂದು ಅವರು ತಿಳಿಸಿದ್ದಾರೆ. ತಮ್ಮ ವಿರುದ್ಧ ನಡೆದಿದ್ದು ಒಂದು ಯೋಜಿತ ಸಂಚು ಎಂದು ಆರೋಪಿಸಿರುವ ಅವರು, ಈ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಪತ್ರ ಬರೆದಿರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.

