ಬೆಂಗಳೂರು: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(MoEFCC) ‘ಸ್ವಚ್ಛ ವಾಯು ದಿವಸ 2026’ ಅಂಗವಾಗಿ ಘೋಷಿಸಿರುವ 2025-26 ನೇ ಸಾಲಿನ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಮೌಲ್ಯಮಾಪನದಲ್ಲಿ ದಾವಣಗೆರೆ ನಗರವು ರಾಜ್ಯಮಟ್ಟದ ಎರಡು ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (NCAP) ನಾನ್-ಅಟೈನ್‌ಮೆಂಟ್ ನಗರವಾಗಿರುವ ದಾವಣಗೆರೆಯು, ಜನಸಂಖ್ಯೆ ಆಧಾರಿತ ವರ್ಗೀಕರಣದಡಿ ಅತ್ಯುತ್ತಮ ಸಾಧನೆ ತೋರಿದೆ. ನಗರದ ಎಸ್‌ಎಸ್ ಬಡಾವಣೆ – ಬಿ ಬ್ಲಾಕ್ (ಜನಸಂಖ್ಯೆ ವರ್ಗ 2) ಹಾಗೂ ಡಿಸಿಎಂ ಟೌನ್‌ಶಿಪ್ (ಜನಸಂಖ್ಯೆ ವರ್ಗ 3) ಈ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿವೆ.
ಸದರಿ ಗೌರವದೊಂದಿಗೆ ನಗರಕ್ಕೆ ಒಟ್ಟು ರೂ 25.00 ಲಕ್ಷ ರೂಪಾಯಿಗಳ ನಗದು ಬಹುಮಾನ ಲಭಿಸಿದೆ. ವಾಯು ಮಾಲಿನ್ಯ ನಿಯಂತ್ರಣ, ಪರಿಸರ ಜಾಗೃತಿ ಹಾಗೂ ನೈರ್ಮಲ್ಯ ನಿರ್ವಹಣೆಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಮಹಾನಗರ ಪಾಲಿಕೆಯ ಸತತ ಪ್ರಯತ್ನಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಹಾಗೂ ದಾವಣಗೆರೆಯ ನಾಗರಿಕರು ತೋರಿದ ಸಹಕಾರ ಮತ್ತು ಶ್ರಮಕ್ಕೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ನಗರದ ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಬದ್ಧರಾಗಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲಾ ತಂಬಾಕು ವ್ಯಾಪಾರಸ್ಥರಿಗೆ ಪರವಾನಗಿ ನೀಡಲು ಸೂಚನೆ
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಂಬಾಕು ವ್ಯಾಪಾರಸ್ಥರಿಗೆ ಪರವಾನಗಿಯನ್ನು ಮುಂಬರುವ 15 ದಿನಗಳ ಒಳಗಾಗಿ ನೀಡುವಂತೆ ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ಎಲ್ಲಾ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.
ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಕೋಶದ ಸ್ಥಳೀಯ ಆರೋಗ್ಯ ನಿರೀಕ್ಷಕರುಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಪರವಾನಗಿ ಅನುಷ್ಠಾನ & ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ & ಸಾಮರ್ಥ್ಯ ಅಭಿವೃದ್ಧಿ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಅಧಿಸೂಚನೆಯಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡಲು ಪ್ರತ್ಯೇಕ ಪರವಾನಗಿ ಕಡ್ಡಾಯವಾಗಿರುವುದರಿಂದ ಕೋಟ್ಪಾ ಕಾಯ್ದೆಯ ರಾಜ್ಯ ತಿದ್ದುಪಡಿ -2024 ರಂತೆ ಸೆಕ್ಷನ್-4 (ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ) & 6ಎ (21 ವರ್ಷದ ಒಳಗಿನ ವ್ಯಕ್ತಿಗಳಿಂದ, ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ನಿಷೇಧ) ಉಲ್ಲಂಘನೆಗಳಿಗೆ ದಂಡದ ಮೊತ್ತವು ರೂ.1000 ವರೆಗೆ ದಂಡ ವಿಧಿಸಲು ಸೂಚಿಸಿದರು ಹಾಗೂ ಸೆಪ್ಟೆಂಬರ್ ಮಾಹೆಯನ್ನು ತಂಬಾಕು ಉತ್ಪನ್ನಗಳ ಪರವಾನಗಿ ಅಭಿಯಾನ ಹಮ್ಮಿಕೊಂಡು ಎಲ್ಲಾ ವ್ಯಾಪಾರಸ್ಥರಿಗೆ ಪರವಾನಗಿ ನೀಡಿ ಉಲ್ಲಂಘನೆ ಮಾಡುವವರ ವಿರುದ್ದ ತಂಬಾಕು ಉತ್ಪನ್ನಗಳ ಉದ್ಯಮ ಪರವಾನಗಿ ಅಧಿಸೂಚನೆ ಅನ್ವಯ ರೂ.4000 ವರೆಗೆ ದಂಡ ವಿಧಿಸಿ ಕ್ರಮ ಕೈಗೊಂಡು ದಾವಣಗೆರೆ ನಗರವನ್ನು ಮಾದರಿ ನಗರವನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸದಸ್ಯ ಕಾರ್ಯದರ್ಶಿ ಡಾ. ಮಧು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಾಧಿಕೃತವಾಗಿ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಿ ಪರವಾನಗಿಯನ್ನು ಪಡೆಯುವಂತೆ ಹಾಗೂ ಆರೋಗ್ಯ ನಿರೀಕ್ಷಕರುಗಳು ನಗರದ ಹೋಟೇಲ್‌ಗಳಲ್ಲಿ ಆಹಾರದ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಪರಿಶೀಲಿಸಿ ಶುಚಿತ್ವವನ್ನು ಕಾಪಾಡುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಶಶಿಧರ್ ತಂಬಾಕು ಸೇವನೆಯಿಂದ ಮಾನವ ದೇಹದ ಮೇಲಾಗುವ ದುಷ್ಪಾರಿಣಾಗಳು ಹಾಗೂ ಜಾಗತಿಕವಾಗಿ ಸಾವು ನೋವುಗಳ ಕುರಿತು ತಿಳಿಸಿ ಶೈಕ್ಷಣಿಕ ಸಂಸ್ಥೆಯ 100 ಮೀ ಅಂತರದಲ್ಲಿ ತಂಬಾಕು ಉತ್ಪನ್ನಗಳು ಮಾರಾಟವಾಗದಂತೆ ಕ್ರಮ ವಹಿಸಿ ಯುವಜನತೆ ತಂಬಾಕು ಸೇವನೆಗೆ ಬಲಿಯಾಗದಂತೆ ಕಾಪಡಲು ತಂಬಾಕು ಉತ್ಪನ್ನ ಉದ್ಯಮ ಪರವಾನಗಿ ನೀತಿಯು ಬಹಳ ಪರಿಣಾಮಕಾರಿಯಾಗಿದ್ದು, ಆದ್ದರಿಂದ ಮಹಾನಗರ ವ್ಯಾಪ್ತಿಯಲ್ಲಿ ಸದರಿ ನೀತಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ತಿಳಿಸಿದರು.
ತರಬೇತಿಯಲ್ಲಿ ರಾಜ್ಯ ತಂಬಾಕು ಪರವಾನಗಿಯ ಸಲಹೆಗಾರರಾದ ತೀರ್ಥೇಶ್ ಎನ್, ರಾಜ್ಯ ತಂಬಾಕು ನಿಯಂತ್ರಣ ಘಟಕ, ವಿಭಾಗೀಯ ಸಂಯೋಜಕರಾದ ಮಹಾಂತೇಶ್ ಬಿ. ಉಳ್ಳಾಗಡ್ಡಿ, ಜಿಲ್ಲಾ ಸಲಹೆಗಾರರಾದ ಸತೀಶ್ ಕಲಹಾಳರವರು ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗದ ನಿವಾರಣಾಧಿಕಾರಿಗಳಾದ ಡಾ|| ಮಂಜುನಾಥ ಪಾಟೀಲ್, ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್, ಸಮಾಜ ಕಾರ್ಯಕರ್ತರಾದ, ಶೈಲಾ ಶಾಮನೂರು, ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆರೋಗ್ಯ ನಿರೀಕ್ಷಕರುಗಳ ಅಧಿಕಾರಿ ಹಾಗೂ ಸಿಬ್ಬಂದಿಯವರು ಹಾಜರಿದ್ದರು.

