ಬೆಂಗಳೂರು: ಅಹಿಂದ ನಾಯಕ ಯಾರು ಎಂಬುದನ್ನು ಜನ ತೀರ್ಮಾಅನ ಮಾಡಬೇಕು. ಯಾರೋ ಒಬ್ಬರನ್ನು ಎತ್ತಿ ಕಟ್ಟೋದಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಅರಮನೆ ಮೈದಾನದಲ್ಲಿ ನಡೆದ ಅಹಿಂದ ಕಾರ್ಯಕ್ರಮಕ್ಕೆ ಆಹ್ವಾನಿಸದ ವಿಚಾರವಾಗಿ ಪ್ರತಿಕ್ರಿಯಿಸಿದರು. ನಮ್ಮನ್ನು ಕರೆದಿಲ್ಲ ಅಂದ ಮೇಲೆ ಪ್ರಶ್ನೆ ಉದ್ಬವಿಸಲ್ಲ. ನೀವು ಆಯೋಜಕರನ್ನೇ ಕೇಳಬೇಕು. ಯಾರು ಕರೆಯುತ್ತಾರೆ, ಅಲ್ಲಿಗೆ ಹೋಗ್ತೇವೆ. ಇದು ಪಕ್ಷಕ್ಕೆ ಡ್ಯಾಮೇಜಾ ನೊಡೋಣ. ಅಹಿಂದ ಎಂದಿಗೂ ಹೋಳಾಗಲ್ಲ. ಸಿದ್ದರಾಮಯ್ಯ, ಸತೀಶ್, ಮಹದೇವಪ್ಪ ಅಷ್ಟೇ ಅಲ್ಲ, ಎಲ್ಲರೂ ಅಹಿಂದ ಲೀಡರ್ಗಳೇ ಎಂದರು.
ನಾವು ಹಿಂದೆ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿದ್ದೆವು. ಎಸ್ಸಿಗೆ ಸೀಮಿತವಾಗಿ ಮಾಡಿದ್ದೆವು. ಇನ್ನು ಗಂಭೀರ ಸಮಸ್ಯೆ ಉದ್ಭವವಾಗಿಲ್ಲ. ಆ ರೀತಿ ಇದ್ದರೆ ಆಮೇಲೆ ನೊಡೋಣ. ಜನ ಯಾರನ್ನು ಒಪ್ತಾರೋ ಅವರು ಅಹಿಂದ ಲೀಡರ್. ಗೊಂದಲ ಏನಿಲ್ಲ. ಮುಂದೆ ಸರಿಯಾಗುತ್ತದೆ ಎಂದರು.
ಸಿದ್ದರಾಮಯ್ಯ ವಿರುದ್ಧ ಪಿತೂರಿ ಮಾಡಿಲ್ಲ. ನಮ್ಮದು ಸಮಾಜಸೇವೆ ಅಷ್ಟೇ ಕೆಲಸ. ಯಾರೋ ಒಬ್ಬರನ್ನು ಎತ್ತಿ ಕಟ್ಟೋದಿಲ್ಲ. ಎಲ್ಲವನ್ನೂ ಜನ ತೀರ್ಮಾಅನ ಮಾಡಬೇಕು ಎಂದು ಹೇಳಿದರು.
ಅಹಿಂದ ನಾಯಕರ ನಡುವೆ ಬಿರುಕು ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅಹಿಂದದಲ್ಲಿ ಬಿರುಕು ಆಗಲಿ ಅಂತ ಅನ್ನೋರು ನಮ್ಮ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಹಿಂದೆ ಯಾರು ಕುಳಿತು ಮಾಡುತ್ತಿದ್ದಾರೆ. ಇದನ್ನು ಮುಖಂಡರು ಅರಿಯಬೇಕು. ಒಂದು ಸಭೆ ಆದ ನಂತರ ಎಲ್ಲ ಮುಗಿಯಿತು ಅಂತಲ್ಲ. 30, 40 ವರ್ಷ ರಾಜಕಾರಣ ಮಾಡಿದವರಿದ್ದಾರೆ. ಅವರಿಗೆ ಎಲ್ಲವೂ ಗೊತ್ತಿರುತ್ತದೆ. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದರು.
ನಮಗೆ ಎಲ್ಲಿಯೂ ಹಿನ್ನಡೆ ಆಗಿಲ್ಲ. ನಾವು ಮೊನ್ನೆ ಎಸ್ಟಿ ಸಮಾವೇಶ ಮಾಡಿದ್ದೆವು. ಸಿದ್ದರಾಮಯ್ಯನವರನ್ನು ಕರೆಯಲಿಲ್ಲ ಅಂದ್ರೆ ಹೇಗೆ?. ನಾವೇ ಸರಿಪಡಿಸಿಕೊಳ್ಳುವ ಕೆಲಸ ಮಾಡ್ತೇವೆ. ಆಗದಿದ್ದರೆ ಹೈಕಮಾಂಡ್ ಇದೆ, ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.
ಅಹಿಂದ ಕಾರ್ಯಕ್ರಮಕ್ಕೆ ಆಯೋಜಕರು ನನ್ನನ್ನು ಕರೆದಿಲ್ಲ. ಅದಕ್ಕೆ ಹೋಗಿಲ್ಲ. ಅವರು ಕರೆಯಬೇಕಲ್ಲ. ಕರೆಯದೇ ಹೇಗೆ ಹೋಗುವುದು. ಕರೆದಿದ್ದರೆ ಹೋಗುತ್ತಿದ್ದೆವು. ಅದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ. ಅಹಿಂದ ಅನ್ನೋದು ಯಾರದ್ದೇ ಒಂದು ಆಸ್ತಿ ಅಲ್ಲ. ಯಾರು ಬೇಕಾದರು ಅಹಿಂದ ಅಂತ ಪ್ರತಿಪಾದಿಸಬಹುದು. ಏಕೆ ಕರೆದಿಲ್ಲ ಎಂದು ನನಗೆ ಗೊತ್ತಿಲ್ಲ. ಅದನ್ನು ಆಯೋಜಕರನ್ನೇ ಕೇಳಬೇಕು ಎಂದರು.

