ದಾವಣಗೆರೆ: ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ಆರೋಪಿಸಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಗ್ರಾಮದ ರಘು (36) ಎಂದು ಗುರುತಿಸಲಾಗಿದೆ. ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಉಬೇದುಲ್ಲಾ ಕೊಲೆ ಆರೋಪಿಗಳಾಗಿದ್ದಾರೆ ಎಂದು ವರದಿಯಾಗಿದೆ.
ರಘು ಮತ್ತು ಶೃತಿ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ರಘುವಿನ ಕುಡಿತದ ಚಟದಿಂದಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವೇಳೆ ಕಳೆದ 2–3 ವರ್ಷಗಳಿಂದ ಶೃತಿ ಹಾಗೂ ಉಬೇದುಲ್ಲಾ ನಡುವೆ ಅಕ್ರಮ ಸಂಬಂಧವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ಆರೋಪಿಸಿ ಶೃತಿ, ಉಬೇದುಲ್ಲಾ ಜೊತೆ ಸೇರಿ ರಘುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ್ ಸೇರಿ ರಘುವಿನ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ ಎಂದು ವರದಿಯಾಗಿದೆ.
ಕಾಣೆಯಾಗಿದ್ದ ರಘು; ತನಿಖೆಯಿಂದ ಬಯಲಾದ ಸತ್ಯ
ರಘು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಶೃತಿಯ ಸಹೋದರಿಯನ್ನು ವಿಚಾರಣೆ ನಡೆಸಿದಾಗ ಅನುಮಾನಗಳು ಮೂಡಿದ್ದವು. ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ಪ್ರಕರಣದ ಹಲವು ವಿವರಗಳು ಬೆಳಕಿಗೆ ಬಂದಿವೆ ಎಂದು ವರದಿ ತಿಳಿಸಿದೆ.
ಸದ್ಯ ರಘು ಕೊಲೆ ಹಾಗೂ ಮೃತದೇಹ ಸಾಗಿಸಿದ ಆರೋಪದ ಮೇಲೆ ಶೃತಿ, ಉಬೇದುಲ್ಲಾ ಮತ್ತು ಸುರೇಶ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತುಂಗಭದ್ರಾ ನದಿಯಲ್ಲಿ ರಘುವಿನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

