HomeKarnatakaದಾವಣಗೆರೆ ದಕ್ಷಿಣ ಉಪ ಚುನಾವಣೆ: ಮಾಜಿ ಸಿಎಂ ಪುತ್ರ ಬಿಜೆಪಿ-ಜೆಡಿಎಸ್ ಅಭ್ಯರ್ಥಿ?

ದಾವಣಗೆರೆ ದಕ್ಷಿಣ ಉಪ ಚುನಾವಣೆ: ಮಾಜಿ ಸಿಎಂ ಪುತ್ರ ಬಿಜೆಪಿ-ಜೆಡಿಎಸ್ ಅಭ್ಯರ್ಥಿ?

ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಯಾರು? ಎಂಬುದು ಇನ್ನೂ ಸಹ ಅಂತಿಮವಾಗಿಲ್ಲ. ಕಾಂಗ್ರೆಸ್‌ ಟಿಕೆಟ್‌ ಯಾರಿಗೆ? ಎಂಬ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

ದಾವಣಗೆರೆ ದಕ್ಷಿಣದಲ್ಲಿ ಇದುವರೆಗೂ ಬಿಜೆಪಿ ಗೆದ್ದಿಲ್ಲ. 2008 ರಿಂದ 2023ರ ತನಕ 4 ಚುನಾವಣೆಯಲ್ಲಿಯೂ ಶಾಮನೂರು ಶಿವಶಂಕರಪ್ಪ ಗೆಲ್ಲುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ. ಆದ್ದರಿಂದ ಉಪ ಚುನಾವಣೆ ಗೆದ್ದು ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಾರಿಸುವ ಉತ್ಸಾಹದಲ್ಲಿ ಬಿಜೆಪಿ ಇದೆ.

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿಜೆಪಿಗೆ ದಾವಣಗೆರೆ ದಕ್ಷಿಣ ಕ್ಷೇತ್ರ ಸಿಗಲಿದೆ. ಆದರೆ ಅಭ್ಯರ್ಥಿ ಯಾರು?. ಕ್ಷೇತ್ರದಲ್ಲಿ ಬಿಜೆಪಿಯ ಯಶವಂತರಾವ್ ಜಾಧವ್, ಬಿ.ಜೆ.ಅಜಯ್ ಕುಮಾರ್, ಬಿ.ಲೋಕೇಶ್ ಈಗಾಗಲೇ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಸಿಎಂ ಪುತ್ರ ಅಭ್ಯರ್ಥಿ?; ಸದ್ಯದ ಅಪ್‌ಡೇಟ್ ಮಾಹಿತಿಯ ಪ್ರಕಾರ ಮಾಜಿ ಸಿಎಂ ಪುತ್ರ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ. ಮಾಜಿ ಸಿಎಂ ಜೆ.ಹೆಚ್.ಪಟೇಲ್ ಪುತ್ರ ಮಹಿಮ ಪಟೇಲ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಮಹಿಮ ಪಟೇಲ್ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರು. ಅವರನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಡಲು ಎನ್‌ಡಿಎ ಮಿತ್ರಪಕ್ಷವಾದ ಜೆಡಿಯು ವರಿಷ್ಠ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಪ್ಪಿಗೆ ನೀಡಿದ್ದಾರೆ. ಆದರೆ ರಾಜ್ಯ ನಾಯಕರ ಒಪ್ಪಿಗೆ ಇನ್ನೂ ಬಾಕಿ ಇದೆ.

ಎರಡೂವರೆ ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಕಾರಣ ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಕಣಕ್ಕಿಳಿಸಲು ಬಿಜೆಪಿ-ಜೆಡಿಎಸ್ ನಾಯಕರು ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ. ಅಲ್ಲದೇ ಹೈಕಮಾಂಡ್ ಮಟ್ಟದಲ್ಲಿ ಈ ಕುರಿತು ತೀರ್ಮಾನವಾದರೆ ರಾಜ್ಯ ನಾಯಕರು ಅದನ್ನು ಪಾಲಿಸಬೇಕಿದೆ.

ಮಹಿಮ ಪಟೇಲ್ ಜೆಡಿಯು ಪಕ್ಷದ  ಸದಸ್ಯತ್ವ ಅಭಿಯಾನ ಮಾಡುತ್ತಿದ್ದು, ರಾಜ್ಯಾದ್ಯಂತ ಸಂಚಾರ ನಡೆಸುತ್ತಿದ್ದಾರೆ. ಸದಸ್ಯತ್ವ ನೋಂದಣಿ ಮೂಲಕ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮದೇ ಅಥವಾ ಬೆಂಬಲಿತ ಸರ್ಕಾರ ರಚಿಸುವ ಮಹಾ ಆಕಾಂಕ್ಷೆ ‌ಇದೆ ಎಂದು ಮಹಿಮ ಜೆ.ಪಟೇಲ್ ತಿಳಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ಅವರು ನೀಡಲ್ಲ. ಸದ್ಯದ ಮಾಹಿತಿ ಪ್ರಕಾರ ಈ ಪ್ರಸ್ತಾವನೆಗೆ ಬಿಜೆಪಿ ರಾಜ್ಯ ನಾಯಕರ ಅಂತಿಮ ಒಪ್ಪಿಗೆ ಬಾಕಿ ಇದೆ. ಬಳಿಕ ಅಧಿಕೃತವಾಗಿ ಇದನ್ನು ಘೋಷಣೆ ಮಾಡಲಾಗುತ್ತದೆ.

ದಾವಣಗೆರೆ ಜಿಲ್ಲಾ ಬಿಜೆಪಿ ಘಟಕ ಮಾಜಿ ಸಂಸದ ಜಿಎಂ ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಣ ಎಂದು ವಿಭಾಗವಾಗಿ ಹೋಗಿದೆ. ಆದ್ದರಿಂದ ಜೆಡಿಯು ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಬಣ ಬಡಿದಾಟಕ್ಕೆ ಬ್ರೇಕ್ ಹಾಕುವ ಚಿಂತನೆ ಹೈಕಮಾಂಡ್ ಮಟ್ಟದಲ್ಲಿದೆ ಎಂಬ ಮಾಹಿತಿ ಇದೆ.

2024ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ದಾವಣಗೆರೆ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಜೋರಾಗಿದೆ. ಜಿಎಂ ಸಿದ್ದೇಶ್ವರ ಬಿ.ವೈ.ವಿಜಯೇಂದ್ರ ವಿರೋಧಿ ಗುಂಪಿನಲ್ಲಿದ್ದಾರೆ. ಆದ್ದರಿಂದ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು  ಅಂತಿಮ ಮಾಡುವುದು ರಾಜ್ಯ ನಾಯಕರಿಗೂ ಸವಾಲಿನ ಪ್ರಶ್ನೆಯಾಗಿದೆ.

ಬಿಜೆಪಿಯಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಬಣದಿಂದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಹಲವರ‌ ಹೆಸರುಗಳು ಉಪ ಚುನಾವಣೆ ಟಿಕೆಟ್​​ಗಾಗಿ ಕೇಳಿ ಬರುತ್ತಿದೆ. ಮತ್ತೊಂದೆಡೆ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣದಿಂದ ಕಳೆದ ಬಾರಿ ಪರಾಜಿತರಾಗಿದ್ದ ಅಜಯ್ ಕುಮಾರ್​​ಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular