HomeKarnatakaದಾವಣಗೆರೆ ದಕ್ಷಿಣದ ಕಾಂಗ್ರೆಸ್‌ ಟಿಕೆಟ್‌: ಮುಸ್ಲಿಂಮರಲ್ಲೇ ಭಿನ್ನಮತ!

ದಾವಣಗೆರೆ ದಕ್ಷಿಣದ ಕಾಂಗ್ರೆಸ್‌ ಟಿಕೆಟ್‌: ಮುಸ್ಲಿಂಮರಲ್ಲೇ ಭಿನ್ನಮತ!

ಶಾಮನೂರು ಶಿವಶಂಕರಪ್ಪ ನಿಧನದ ಕಾರಣಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. 4 ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಗೆಲ್ಲುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ. ಆದರೆ ಅವರು ಇಲ್ಲದ ಕಾರಣಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಪ್ರಶ್ನೆ.

ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಉಪ ಚುನಾವಣೆ ಟಿಕೆಟ್ ನೀಡುವ ಕುರಿತು ಕಾಂಗ್ರೆಸ್ ಪಕ್ಷ ಇನ್ನೂ ತೀರ್ಮಾನ ಮಾಡಿಲ್ಲ. ಅಲ್ಲದೇ ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತಗಳಿವೆ. ಆದ್ದರಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಡಲಾಗಿದೆ.

ಆದರೆ ಶಾಮನೂರು ಶಿವಶಂಕರಪ್ಪ ಮೊಮ್ಮನ ಸಮರ್ಥ ಶಾಮನೂರು ಕ್ಷೇತ್ರದಲ್ಲಿ ಬಿರುಸಿನಿಂದ ಓಡಾಟ ನಡೆಸಿದ್ದಾರೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪುತ್ರನ ಓಡಾಟ ನೋಡಿದವರು ಉಪ ಚುನಾವಣೆ ಟಿಕೆಟ್ ಪಕ್ಕಾ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಯಕರಲ್ಲೇ ಭಿನ್ನಮತ: ದಾವಣಗೆರೆ ದಕ್ಷಿಣದಲ್ಲಿ ಈ ಬಾರಿ ಮುಸ್ಲಿಂಮರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಬೇರೆ ಸಮುದಾಯಕ್ಕೆ ಟಿಕೆಟ್ ನೀಡಿದರೆ ಪಕ್ಷೇತರವಾಗಿ ಕಣಕ್ಕಿಳಿಯಲಾಗುತ್ತದೆ ಎಂದು ಕೆಲವು ಮುಸ್ಲಿಂ ನಾಯಕರು ಎಚ್ಚರಿಕೆ ನೀಡಿದ್ದಾರೆ. ಆದರೆ ಮುಸ್ಲಿಂಮರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಒಮ್ಮತವಿಲ್ಲ.

ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, “ಶಾಸಕರಾದವರು ಮೃತರಾದರೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಪಕ್ಷದ ಬೈಲಾದಲ್ಲಿ ಬರೆದಿಲ್ಲ. ಈಗಾಗಲೇ ಶಾಮನೂರು ಕುಟುಂಬದಲ್ಲಿ ಸಚಿವರು, ಸಂಸದರು ಇದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬಾರದೇ?” ಎಂದು ಪ್ರಶ್ನಿಸಿದ್ದಾರೆ.

“ಈ ಬಾರಿ ದಾವಣೆರೆ ದಕ್ಷಿಣ ಕ್ಷೇತ್ರಕ್ಕೆ ಅಹಿಂದ ವರ್ಗದವರನ್ನು ಪರಿಗಣಿಸಬೇಕು. ಅದರಲ್ಲೂ ಹೆಚ್ಚು ಪ್ರಾಬಲ್ಯ ಹೊಂದಿರುವ ಸಮುದಾಯಕ್ಕೆ ಟಿಕೆಟ್ ನೀಡಬೇಕು” ಎಂದು ಕಾಂಗ್ರೆಸ್‌ನ ರಾಜ್ಯ, ರಾಷ್ಟ್ರೀಯ ನಾಯಕರನ್ನು ಒತ್ತಾಯಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, “ಶಾಮನೂರು ಶಿವಶಂಕರಪ್ಪ ಶಾಸಕರಾದದಿನದಿಂದಲೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕೋಮು ಸೌಹಾರ್ದ, ಶಾಂತಿ ನೆಲೆಸಿದೆ. ಅವರು ಕ್ಷೇತ್ರವನ್ನೂ ಅಭಿವೃದ್ಧಿ ಮಾಡಿದ್ದಾರೆ. ಉಪ ಚುನಾವಣೆ ವೇಳೆ ಅವರ ಕುಟುಂಬದವರನ್ನು ಪರಿಗಣಿಸಬೇಕು” ಎಂದು ಹೇಳಿದ್ದಾರೆ.

2023ರ ವಿಧಾನಸಭೆ ಚುನಾವಣೆ ವೇಳೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ 5 ಮುಖಂಡರು ಅರ್ಜಿ ಹಾಕಿದ್ದರು. ಅಂತಿಮವಾಗಿ ಪಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಿತ್ತು. ಅವರು ಗೆದ್ದು ಕ್ಷೇತ್ರವನ್ನು ಪಕ್ಷಕ್ಕೆ ಉಳಿಸಿಕೊಟ್ಟಿದ್ದರು.

ಉಪ ಚುನಾವಣೆ ಟಿಕೆಟ್‌ಗಾಗಿ ಸೈಯದ್ ಸೈಫುಲ್ಲಾ, ಅವರ ಪುತ್ರ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಹಾಗೂ ಅಯೂಬ್ ಪೈಲ್ವಾನ್ ಇನ್ನಿತರರು ಟಿಕೆಟ್​​ ಆಕಾಂಕ್ಷಿಗಳು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ಮಾಡಿದ್ದಾರೆ. 2023ರಲ್ಲಿ ಮುಂದಿನ ಚುನಾವಣೆಯಲ್ಲಿ ಮುಸ್ಲಿಂಮರಿಗೆ ಟಿಕೆಟ್ ನೀಡಬೇಕು ಎಂದು ಹಿಂದೆ ಶಾಮನೂರು ಶಿವಶಂಕರಪ್ಪ ಹೇಳಿದ್ದ ವಿಡಿಯೋ ಮುಂದಿಟ್ಟುಕೊಂಡು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಇನ್ನೂ ಸಹ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಬಿಜೆಪಿ ಇದುವರೆಗೂ ಕ್ಷೇತ್ರದಲ್ಲಿ ಒಂದು ಬಾರಿಯೂ  ಗೆದ್ದಿಲ್ಲ. ಈ ಉಪ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿ ಪಕ್ಷದ ನಾಯಕರು ಇದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular