ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಕರ್ನಾಟಕ ಮೂಲದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಏಕಾಏಕಿ ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಫೆಬ್ರವರಿ 9ರಿಂದ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿದು, ಎಲ್ಲಿಗೆ ಹೋಗಿದ್ದಾನೆ? ಹೇಗೆ ನಾಪತ್ತೆಯಾದ ಎಂಬುದರ ಬಗ್ಗೆ ಗೊತ್ತಾಗುತ್ತಿಲ್ಲ. ಅವರನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ಮತ್ತು ಭಾರತೀಯ ದೂತಾವಾಸ ಕಚೇರಿ ತುರ್ತು ಕ್ರಮ ಕೈಗೊಂಡಿವೆ.
ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿರುವುದು ಭಾರತೀಯ ಸಮುದಾಯದವರಲ್ಲಿ ಹಾಗೂ ಆತನ ಕುಟುಂಬದವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸದ್ಯ, ಆತನ ಪತ್ತೆಗೆ ಸ್ಥಳೀಯ ಪೊಲೀಸರ ಜತೆಗೂಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಭಾರತೀಯ ದೂತಾವಾಸ ಕಚೇರಿ ತಿಳಿಸಿದೆ.
ಸಾಕೇತ್ ಮಾಸ್ಟರ್ಸ್ ವಿದ್ಯಾರ್ಥಿಯಾಗಿದ್ದು, ಅಮೆರಿಕದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೇ ಪಿಜಿ ವ್ಯಾಸಂಗ ಮಾಡುತ್ತಿದ್ದರು. ಅವರು ಫೆಬ್ರವರಿ 10ರಂದು ಕ್ಯಾಲಿಫೋರ್ನಿಯಾದ ಬರ್ಕ್ಲೇ ನಗರದ ಡ್ವೈಟ್ ವೇ ಪ್ರದೇಶದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಸಾಕೇತ್ ಕಾಣೆಯಾಗಿರುವ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸ ಕಚೇರಿ ಆತಂಕ ವ್ಯಕ್ತಪಡಿಸಿದೆ. ಸಾಕೇತ್ನ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೂತಾವಾಸ ಕಚೇರಿ ಹೇಳಿದೆ.
ಪೊಲೀಸರ ಮಾಹಿತಿ ಪ್ರಕಾರ, ಸಾಕೇತ್ ಸುಮಾರು 6 ಅಡಿ 1 ಇಂಚು ಎತ್ತರ ಹೊಂದಿದ್ದು, ಕಪ್ಪು ಕೂದಲು ಮತ್ತು ಕಂದು ಬಣ್ಣದ ಕಣ್ಣುಗಳನ್ನು ಹೊಂದಿದ್ದಾರೆ. ಸಾಕೇತ್ ಅಪಾಯದ ಸ್ಥಿತಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಯಾರಿಗಾದರೂ ಮಾಹಿತಿ ದೊರೆತರೆ ತಕ್ಷಣ ತಿಳಿಸಲು ಬರ್ಕ್ಲೇ ನಗರದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾಕೇತ್ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದು, ಚೆನ್ನೈನ ಮದ್ರಾಸ್ ಐಐಟಿಯಲ್ಲಿ ಬಿ.ಟೆಕ್ ಮಾಡಿದ್ದರು. ಪ್ರಸ್ತುತ ಅವರು ಪ್ರಾಡಕ್ಟ್ ಡೆವಲಪ್‌ಮೆಂಟ್ ಕಾರ್ಯಕ್ರಮದಡಿ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೇಯಲ್ಲಿ ಮಾಸ್ಟರ್ ಆಫ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರು.
ಸಾಕೇತ್ ಡೀಪ್-ಟೆಕ್, ಸೆಮಿಕಂಡಕ್ಟರ್ ಹಾಗೂ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಸದ್ಯ, ಸಾಕೇತ್ ಕಾಣೆಯಾಗಿರುವುದು ಆತಂಕ ಮೂಡಿಸಿದೆ. ವಿದ್ಯಾರ್ಥಿಯನ್ನು ಶೀಘ್ರವೇ ಪತ್ತೆಹಚ್ಚುವಂತೆ ಕುಟುಂಬದವರು ಹಾಗೂ ಭಾರತೀಯ ಸಮುದಾಯದವರು ಒತ್ತಾಯಿಸಿದದರೆ.

