ರಾಜ್ಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಕಣ ಅಂತಿಮಗೊಂಡಿದೆ. ಏಪ್ರಿಲ್ 9ರಂದು ನಡೆಯುವ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಗುರುವಾರ ಅಂತಿಮದಿನವಾಗಿತ್ತು.
ಕಾಂಗ್ರೆಸ್‌ನ ಸಮರ್ಥ್ ಶಾಮನೂರು, ಬಿಜೆಪಿಯ, ಶ್ರೀನಿವಾಸ್ ದಾಸಕರಿಯಪ್ಪ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಕ್ಷೇತ್ರದ ಉಪ ಚುನಾವಣೆ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ ಮುಸ್ಲಿಂ ಸಮುದಾಯದ 14 ಜನರಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್ ನಾಮಪತ್ರ ವಾಪಸ್ ಪಡೆಯದಿರುವುದು, ಪಕ್ಷದ ನಾಯಕರ ಆತಂಕಕ್ಕೆ ಕಾರಣವಾಗಿದೆ. ಮುಸ್ಲಿಂ ಸಮುದಾಯದ 14 ಅಭ್ಯರ್ಥಿಗಳಲ್ಲಿ ಮತಗಳು ಹಂಚಿ ಹೋದರೆ ಕಾಂಗ್ರೆಸ್‌ಗೆ ಹಿನ್ನಡೆ ಖಚಿತ.
ಅಂತಿಮ ಚುನಾವಣಾ ಕಣ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ಅಭ್ಯರ್ಥಿಗಳ ಪೈಕಿ 11 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಮುಸ್ಲಿಂ ಸಮುದಾಯದ 22 ಜನರ ಪೈಕಿ 8 ಜನರು ನಾಮಪತ್ರ ವಾಪಸ್ ಪಡೆದಿದ್ದಾರೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
- ಸಮರ್ಥ್ ಶಾಮನೂರು – ಕಾಂಗ್ರೆಸ್
- ಶ್ರೀನಿವಾಸ ದಾಸಕರಿಯಪ್ಪ – ಬಿಜೆಪಿ
- ಅಫ್ಸರ್ ಕೊಡ್ಲಿಪೇಟೆ – ಎಸ್‌ಡಿಪಿಐ
- ಸಾದಿಕ್ ಪೈಲ್ವಾನ್ – ಪಕ್ಷೇತರ
2008 ರಿಂದ 2023ರ ತನಕ ನಡೆದ 4 ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಗೆಲುವಿಗೆ ಮುಸ್ಲಿಮರ ಕೊಡುಗೆ ಅಪಾರವಾಗಿತ್ತು. ಆದ್ದರಿಂದಲೇ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೇಳಲಾಗಿತ್ತು. ಆದರೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ಪುತ್ರ ಸಮರ್ಥ್ ಶಾಮನೂರು ಅಭ್ಯರ್ಥಿಯಾಗುವಂತೆ ನೋಡಿಕೊಂಡರು.
ಈಗ ಮುಸ್ಲಿಂ ಸಮುದಾಯದ ಮತಗಳು ಹರಿದು ಹಂಚಿ ಹೋಗುವ ಆತಂಕ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ. ಸಮರ್ಥ್ ಶಾಮನೂರು ಟಿಕೆಟ್ ಪಡೆಯಲು ಕುಟುಂಬ ಹೋರಾಟ ಮಾಡಿದ್ದು, ಅವರು ಚುನಾವಣೆಯಲ್ಲಿ ಸೋತರ ಶಾಮನೂರು ಕುಟುಂಬದ ಪ್ರತಿಷ್ಠೆಗೆ ಪೆಟ್ಟು ಬೀಳಲಿದೆ.
ದಾವಣಗೆರೆ ದಕ್ಷಿಣದಲ್ಲಿ ಇದುವರೆಗೂ ಒಂದು ಚುನಾವಣೆಯನ್ನು ಗೆಲ್ಲದ ಬಿಜೆಪಿ ಈ ಬಾರಿ ಕಾರ್ಯತಂತ್ರ ಬದಲಾವಣೆ ಮಾಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಕಾಂಗ್ರೆಸ್ ಮತ್ತು ಮುಸ್ಲಿಂ ಸಮುದಾಯದ ನಡುವೆ ನಡೆಯುತ್ತಿರುವ ಜಟಾಪಟಿ ಲಾಭ ಪಡೆದು ಉಪ ಚುನಾವಣೆ ಗೆಲ್ಲಬೇಕು ಎಂಬುದು ಬಿಜೆಪಿ ತಂತ್ರವಾಗಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅವರ ಮನವೊಲಿಕೆ ಮಾಡುವ ಕಾಂಗ್ರೆಸ್ ನಾಯಕರ ಕೊನೆ ಕ್ಷಣದ ಪ್ರಯತ್ನಗಳು ಫಲ ಕೊಟ್ಟಿಲ್ಲ. ಮುಸ್ಲಿಂ ಸಮುದಾಯದ ಮತಗಳನ್ನು ಅವರು ನಂಬಿಕೊಂಡಿದ್ದು, ಸಮುದಾಯ ತಮ್ಮ ಪರವಾಗಿ ಇರಲಿದೆ ಎಂಬ ಅಪಾರ ವಿಶ್ವಾಸದಲ್ಲಿದ್ದಾರೆ.

