ದಾವಣಗೆರೆ: ಭಾವಿ ಪತ್ನಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವರನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮದುವೆ ನಿಶ್ಚಯವಾಗಿದ್ದ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.
ತಾಲೂಕಿನ ಹಳ್ಳಿಯೊಂದರಲ್ಲಿ ಎರಡು ಕುಟುಂಬಗಳ ಹಿರಿಯರು ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ ಮಕ್ಕಳ ಮದುವೆ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಹುಡುಗ ಮತ್ತು ಹುಡುಗಿಯ ನಡುವೆ ಪರಿಚಯ ಬೆಳೆದಿತ್ತು. ಮದುವೆ ನಿಶ್ಚಯವಾಗಿದ್ದ ಕಾರಣ ಇಬ್ಬರೂ ಪರಸ್ಪರ ಆತ್ಮೀಯವಾಗಿದ್ದರು ಎನ್ನಲಾಗಿದೆ.
ಆದರೆ, ಹುಡುಗಿ ಅಪ್ರಾಪ್ತೆಯಾಗಿದ್ದ ಹಿನ್ನೆಲೆಯಲ್ಲಿ ಮದುವೆ ವಿಚಾರದಲ್ಲಿ ಕಾನೂನು ಸಂಬಂಧಿತ ಸಮಸ್ಯೆ ಎದುರಾಗಿದೆ. ಬಾಲಕಿ ಪ್ರಾಪ್ತವಯಸ್ಕಳಾಗಲು ಇನ್ನೂ ಸುಮಾರು 15 ತಿಂಗಳು ಬಾಕಿ ಇತ್ತು. ಈ ನಡುವೆ ಯುವಕ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಳಿಕ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಬಾಲಕಿ ಗರ್ಭಿಣಿಯಾಗಿರುವುದನ್ನು ತಿಳಿಸಿದಾಗ ಕುಟುಂಬದವರಿಗೆ ವಿಷಯ ಗೊತ್ತಾಗಿದೆ ಎನ್ನಲಾಗಿದೆ. ಮಗಳ ಸ್ಥಿತಿಯ ಬಗ್ಗೆ ತಿಳಿದ ಕುಟುಂಬದವರು ಆಕೆಯೊಂದಿಗೆ ಮಾತನಾಡಿದಾಗ, ಯುವಕನ ವಿರುದ್ಧ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸೇನಾ ಮೆಡಲ್ ಪುರಸ್ಕೃತರಿಗೆ ಉಚಿತ ರೈಲು ಪ್ರಯಾಣ ಪಾಸ್
ದಾವಣಗೆರೆ: ಸೇನಾ, ವಾಯು ಸೇನಾ ಮತ್ತು ನೌಕಾ ಸೇನಾ ವಿಭಾಗಗಳ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಭಾರತೀಯ ರೈಲ್ವೇ ಪ್ರಾಧಿಕಾರವು ಉಚಿತ ರೈಲು ಪ್ರಯಾಣ ಸೇವೆಯನ್ನು ಆರಂಭಿಸಿದೆ.
ಈ ಉಚಿತ ರೈಲು ಪ್ರಯಾಣಕ್ಕಾಗಿ ಪಾಸ್‌ಗಳನ್ನು ಪಡೆಯಲು https://irccp.indianrail.gov.in/IRCCP ಜಾಲತಾಣದಲ್ಲಿ ನೋಂದಣಿ ಪ್ರಕ್ರಿಯೆಯು ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಿದ್ದು, ನೋಂದಾಯಿತ ಫಲಾನುಭವಿಗಳು ನವೆಂಬರ್ 1 ರಿಂದ IRCTC ಪೋರ್ಟಲ್ ನಲ್ಲಿ ಉಚಿತ ಪ್ರಯಾಣದ ಟಿಕೆಟ್ ಗಳನ್ನು ಕಾಯ್ದಿರಿಸಬಹುದಾಗಿದೆ.
ಈ ಉಚಿತ ಪ್ರಯಾಣ ಸೇವೆಯು ಶೌರ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಅವರೊಂದಿಗೆ ಪ್ರಯಾಣಿಸುವ ಓರ್ವ ಸಂಗಾತಿಗೆ ಮಾತ್ರ ಅನ್ವಯವಾಗಲಿದೆ. ಹೆಚ್ವಿನ ಮಾಹಿತಿಗಾಗಿ 08182-220925 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಸೈನಿಕರು, ಮಾಜಿ ಸೈನಿಕರು ಮತ್ತು ಅವಲಂಬಿತರುಗಳಿಗೆ ಎಂ.ಬಿ.ಎ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಆಹ್ವಾನ
ದಾವಣಗೆರೆ: ಮಹಾರಾಷ್ಟ್ರದ ಪುಣೆ (ಖಡಕಿ) ಯಲ್ಲಿರುವ ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆಯು 2027-2029ನೇ ಸಾಲಿಗೆ ಎಂ.ಬಿ.ಎ ವ್ಯಾಸಂಗಕ್ಕಾಗಿ ಸೈನಿಕರು, ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರುಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನ ಆಹ್ವಾನಿಸಲಾಗಿದೆ.
ಆಸಕ್ತರು 2026 ನವೆಂಬರ್ 25 ರೊಳಗಾಗಿ ಸಂಸ್ಥೆಯ ಅಧಿಕೃತ ಜಾಲತಾಣವಾದ www.sims.edu ಮೂಲಕ ಆನ್‌ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿದ್ಯಾ ಸಂಸ್ಥೆಯ www.sims.edu ವೆಬ್‌ಸೈಟ್‌ಗೆ ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

