ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕೊಲೆ ಆರೋಪದಲ್ಲಿ ಜೈಲು ಸೇರಿದ್ದರೂ ದರ್ಶನ್ ಗೆ ಅಭಿಮಾನಿಗಳ ಅಭಿಮಾನಕ್ಕಂತೂ ಕೊರತೆಯಿಲ್ಲ. ದರ್ಶನ್ ಸೆಲೆಬ್ರಿಟಿಯಾಗಿರುವುದಿರಂದ ಜೈಲಿನಲ್ಲಿ ಪ್ರತ್ಯೇಕ ಬ್ಯಾರಕ್ನಲ್ಲಿ ಇರಿಸಲಾಗಿದೆ. ಜೈಲಿನಲ್ಲಿಯೂ ದರ್ಶನ್ ನ ನೋಡಲು ಅಭಿಮಾನಿಗಳು ಕಾತರದಿದ ಕಾಯುತ್ತಿದ್ದಾರೆ. ಅದೂ ಕೂಡ ಪೊಲೀಸ್ ಅಭಿಮಾನಿಗಳು ಎಂಬುದು ವಿಶೇಷ.
ನಟ ದರ್ಶನ್ ಅಭಿಮಾನಿಗಳಾಗಿರುವ ಕೆಲ ಪೊಲೀಸರು ಜೈಲಿನಲ್ಲಿ ದರ್ಶನ್ ನನ್ನು ಭೇಟಿಯಾಗಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಕದ್ದುಮುಚ್ಚಿ ದರ್ಶನ್ ನನ್ನು ಜೈಲಿನಲ್ಲಿ ಭೇಟಿಯಾಗಲು ಹೋಗಿದ್ದ ಪೊಲೀಸ್ ಸಿಬ್ಬಂದಿಗೆ ಸಂಕಷ್ಟ ಶುರುವಾಗಿದೆ.
ಯಾರಿಗೂ ಗೊತ್ತಾಗದಂತೆ ದರ್ಶನ್ ಭೇಟಿಯಾಗಲು ಹೋಗಿದ್ದ ಕಾನ್ಸ್ ಟೇಬಲ್ ಹಾಗೂ ಅವರಿಗೆ ಸಹಾಯ ಮಾಡಿದ್ದ ಜೈಲಿನ ವಾರ್ಡನ್ ಇಬ್ಬರ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಾನೂನು ಕ್ರಮ ಕೈಗೊಂಡಿದ್ದಾರೆ.
ನಿಯಮ ಮೀರಿ ದರ್ಶನ್ ನನ್ನು ನೋಡಲು ಹೋದ ಯಲಹಂಕ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಅವರಿಗೆ ಸಹಾಯ ಮಾಡಿದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಡಿಜಿಪಿ ಅಲೋಕ್ ಕುಮಾರ್ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕರ್ತವ್ಯಲೋಪ ಬೆಳಕಿಗೆ ಬಂದಿದೆ.
ತಕ್ಷಣ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಪ್ರಭುಶಂಕರ ಚೌಹಾಣ್ ರನ್ನು ಚಾಮರಾಜನಗರ ಕಾರಾಗೃಹಕ್ಕೆ ಎತ್ತಂಗಡಿ ಮಾಡುವಂತೆ ಇಲಾಖೆ ತನಿಖೆಗೆ ಸೂಚಿಸಿದ್ದಾರೆ.
ಕಳೆದ ಜನವರಿ 24 ರಂದು ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಗಣೇಶ್ ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ವಾರ್ಡರ್ ಪ್ರಭುಶಂಕರ್ ಚೌಹಾಣ್ ಬಳಿ, ನಟ ದರ್ಶನ್ ನೋಡಬೇಕು ಎಂದಿದ್ದಾರೆ. ಇದಕ್ಕೆ ಒಪ್ಪಿದ ಪ್ರಭಾಕರ್, ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ರಹಸ್ಯವಾಗಿ ಪೇದೆಯನ್ನು ದರ್ಶನ್ ಇದ್ದ ಬ್ಯಾರಕ್ ಬಳಿ ಕರೆದೊಯ್ದಿದ್ದರು.
ಈ ವಿಚಾರ ತಿಳಿದ ಡಿಜಿಪಿ ಅಲೋಕ್ ಕುಮಾರ್, ವಾರ್ಡನ್ ಪ್ರಭುಶಂಕರ ಚೌಹಾಣ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಾಮರಾಜನಗರ ಕಾರಾಗೃಹಕ್ಕೆ ವರ್ಗಾವಣೆ ಮಾಡಿದ್ದಾರೆ. ಇನ್ನು ದರ್ಶನ್ ನೋಡಲು ಹೋಗಿದ್ದ ಕಾನ್ಸ್‌ಟೇಬಲ್ ಗಣೇಶ್ ವಿರುದ್ಧದವೂ ಕ್ರಮಕ್ಕೆ ಸೂಚಿಸಿದ್ದಾರೆ.
ಡಿಜಿಪಿ ಅಲೋಕ್ ಕುಮಾರ್, ತಮ್ಮ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಗಳಿಂದ ದರ್ಶನ್ ಸೆಲ್‌ಗೆ ಖಾಕಿ ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಭೇಟಿ ನೀಡಿದ್ದನ್ನು ವೀಕ್ಷಿಸಿದ್ದರು ಎಂದು ತಿಳಿದುಬಂದಿದೆ.

