ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಎಸ್.ಎಸ್.ರಾಜಮೌಳಿ ‘ವಾರಾಣಸಿ’ ಸಿನಿಮಾಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನಿರ್ದೇಶಕ ರಾಜಮೌಳಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ.
ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಒಟ್ಟಾಗಿರುವ ಮೊದಲ ಸಿನಿಮಾ ‘ವಾರಣಾಸಿ’. ಈ ಚಿತ್ರದಲ್ಲಿ ಮಹೇಶ್ ಬಾಬು ರುದ್ರನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಈ ಸಿನಿಮಾ 2027ರ ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ನಿರ್ದೇಶಕ ಎಸ್.ಎಸ್.ರಾಜಮೌಳಿ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ.
ಚಿತ್ರ ಬಿಡುಗಡೆ ಯಾವಾಗ?: ನಿರ್ದೇಶಕ ಎಸ್.ಎಸ್.ರಾಜಮೌಳಿ ಪೋಸ್ಟ್ ಪ್ರಕಾರ ‘ವಾರಾಣಸಿ’ ಏಪ್ರಿಲ್ 7, 2027ರಂದು ತೆರೆಗೆ ಬರಲಿದೆ. ಈ ಕುರಿತು ಎಸ್.ಎಸ್.ರಾಜಮೌಳಿ ಘೋಷಣೆ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಇನ್ನೂ ಒಂದು ವರ್ಷ ಕಾಯಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
2025ರ ನವೆಂಬರ್‌ನಲ್ಲಿ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ವಾರಣಾಸಿ’ ಸಿನಿಮಾದ ಶೀರ್ಷಿಕೆ ಮತ್ತು ಟೀಸರ್ ಬಿಡುಗಡೆ ಮಾಡಲಾಗಿತ್ತು. ಸುಮಾರು 50,000 ಜನರು ಈ ಕಾರ್ಯಕ್ರಮಕ್ಕೆ ಸೇರಿದ್ದರು.
ಎಸ್.ಎಸ್.ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಇನ್ನಷ್ಟು ಕಲಾವಿದರು ಚಿತ್ರತಂಡಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಚಿತ್ರಕ್ಕೆ ಥಮನ್ ಸಂಗೀತ ನಿರ್ದೇಶಕರು.
ಟೀಸರ್ ಮತ್ತು ಶೀರ್ಷಿಕೆ ಮೂಲಕ ‘ವಾರಣಾಸಿ’ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮಹೇಶ್ ಬಾಬು ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾದು ಕುಳಿತಿದ್ದಾರೆ. ಪ್ರತಿದಿನ ಚಿತ್ರದ ಅಪ್‌ಡೇಟ್‌ಗಾಗಿ ಗೂಗಲ್ ಮೊರೆ ಹೋಗುತ್ತಿದ್ದಾರೆ.
ನಿರ್ದೇಶಕ ಎಸ್.ಎಸ್.ರಾಜಮೌಳಿ ಸಿನಿಮಾಗಳು ಹಾಗೆಯೇ. ಅವರು ಚಿತ್ರವನ್ನು ಮಾಡಲು ಸುಮಾರು 3 ವರ್ಷ ತೆಗೆದುಕೊಳ್ಳುತ್ತಾರೆ. ‘ವಾರಣಾಸಿ’ ಚಿತ್ರದ ಸದ್ಯದ ಅಪ್‌ಡೇಟ್ ಪ್ರಕಾರ ಇನ್ನು 8 ತಿಂಗಳ ಚಿತ್ರೀಕರಣ ಬಾಕಿ ಇದೆ.
ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಲಿದೆ. ಈಗ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರೇ ಏಪ್ರಿಲ್ 7, 2027ಕ್ಕೆ ಸಿನಿಮಾ ಬಿಡುಗಡೆ ಎಂದು ಘೋಷಣೆ ಮಾಡಿರುವ ಕಾರಣಕ್ಕೆ ಅದೇ ದಿನಾಂಕಕ್ಕೆ ಸರಿಯಾಗಿ ಚಿತ್ರ ಬಿಡುಗಡೆಯಾಗಲಿದೆ ಎಂದು ಅಂದಾಜಿಸಬಹುದು.
ಮಲೆಯಾಳಂ ಚಿತ್ರರಂಗದ ಖ್ಯಾತ ನಟ ಪೃಥ್ವಿರಾಜ್ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಹಾಲಿವುಡ್ ಮೀರಿಸುವಂತೆ ನಿರ್ಮಾಣ ಮಾಡಬೇಕು ಎಂದು ರಾಜಮೌಳಿ ಮತ್ತು ಅವರ ತಂಡ ಯೋಜನೆ ರೂಪಿಸಿದೆ. ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಚಿತ್ರದ ಕುರಿತ ಅಪ್‌ಡೇಟ್‌ಗಳು ಫುಲ್ ಟ್ರೆಂಡಿಂಗ್ ನಲ್ಲಿವೆ.
ಆರ್‌ಆರ್‌ಆರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಮುಂದಿನ ಸಿನಿಮಾ ಯಾವುದು, ನಾಯಕ ಯಾರು? ಎಂದು ಬಹಳ ಚರ್ಚೆ ನಡೆದಿತ್ತು. ಅಂತಿಮವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮಾಹಿತಿಯಂತೆ ರಾಜಮೌಳಿ, ಮಹೇಶ್ ಬಾಬು ಒಂದಾಗಿದ್ದರು. ಆದರೆ ಚಿತ್ರದ ಹೆಸರು ಅಂತಿಮವಾಗಿರಲಿಲ್ಲ.
ಈಗ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನ ಚಿತ್ರದ ಹೆಸರು ‘ವಾರಣಾಸಿ’ ಎಂದು ತಿಳಿದ ಬಳಿಕ ಚಿತ್ರದ ಕುರಿತು ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಆದರೆ ಚಿತ್ರ ಬಿಡುಗಡೆಯಾಗಲು ಏಪ್ರಿಲ್ 2027ರ ತನಕ ಕಾಯಬೇಕು ಎಂಬುದೇ ಬೇಸರದ ಸಂಗತಿಯಾಗಿದೆ.
ಸದ್ಯದ ಮಾಹಿತಿ ಪ್ರಕಾರ 2027ರ ಜನವರಿಯಲ್ಲಿ ಪ್ರಭಾಸ್ ನಟನೆಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದೊಂದಿಗೆ ಆಗುವ ಫೈಟ್ ತಪ್ಪಿಸಲು ನಿರ್ಮಾಪಕರು ‘ವಾರಣಾಸಿ’ ಚಿತ್ರದ ಬಿಡುಗೆಡೆ ದಿನಾಂಕವನ್ನು ಏಪ್ರಿಲ್‌ಗೆ ಮುಂದಕ್ಕೆ ಹಾಕಿದ್ದಾರೆ.

