HomeKarnatakaBIG NEWS: ಸಚಿವ ಡಿ.ಸುಧಾಕರ್ ವಿಧಿವಶ: ರಾಜ್ಯಾದ್ಯಂತ ಸರ್ಕಾರದಿಂದ ಮೂರು ದಿನ ಶೋಕಾಚರಣೆ

BIG NEWS: ಸಚಿವ ಡಿ.ಸುಧಾಕರ್ ವಿಧಿವಶ: ರಾಜ್ಯಾದ್ಯಂತ ಸರ್ಕಾರದಿಂದ ಮೂರು ದಿನ ಶೋಕಾಚರಣೆ

ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೋಕಾಚರಣೆ ಘೋಷಣೆ ಮಾಡಿದೆ. ರಾಜ್ಯಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.

ನಾಳೆ ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

65 ವರ್ಷದ ಸಚಿವ ಡಿ.ಸುಧಾಕರ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ವಯಸ್ಸಾಗಿತ್ತು. ಸಚಿವರ ಅಗಲಿಕೆಗೆ ರಾಜಕೀಯ ನಾಯಕರು, ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.

ಡಿ. ಸುಧಾಕರ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ ಡಿ. ಸುಧಾಕರ್ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ಮತ್ತು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅಂತಿಮ ದರ್ಶನದ ಬಳಿಕ, ಡಿ. ಸುಧಾಕರ್ ಅವರ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ. ಚಳ್ಳಕೆರೆಯಲ್ಲಿರುವ ಸುಧಾಕರ್ ಶಟಲ್ ಕಾಕ್ ಕೋರ್ಟ್‌ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ಡಿ. ಸುಧಾಕರ್ ಅವರ ನಿಧನ ಹಿರಿಯೂರು ಮತ್ತು ಚಿತ್ರದುರ್ಗಜಿಲ್ಲೆಯ ರಾಜಕಾರಣದ ಒಂದು ಶಕೆಗೆ ತೆರೆಬಿದ್ದಿದೆ. ಕೃಷಿ ಮತ್ತು ಉದ್ಯಮದಿಂದ ಆರಂಭವಾಗಿ ವಿಧಾನಸಭೆಯವರೆಗೆ ಬೆಳೆದ ಇವರ ಪಯಣ ಅಸಂಖ್ಯಾತ ಏರಿಳಿತಗಳಿಂದ ಕೂಡಿದ್ದರೂ, ನಾಲ್ಕು ಬಾರಿ ಜಯಗಳಿಸುವ ಮೂಲಕ ಜಿಲ್ಲೆಯ ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ್ದರು.

1961ರಲ್ಲಿ ಜನಿಸಿದ ಡಿ. ಸುಧಾಕರ್, ಬಿ.ಕಾಂ ಪದವಿ ಮುಗಿಸಿ ತಂದೆಯವರ ಕೃಷಿ ಮತ್ತು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಮಾಜಿ ಶಾಸಕ ಎನ್. ಜಯಣ್ಣ ಅವರಿಂದ ರಾಜಕೀಯದ ಪಟ್ಟುಗಳನ್ನು ಕಲಿತ ಇವರು, 2004ರಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. ಕ್ಷೇತ್ರ ಮೀಸಲಾತಿ ಬದಲಾದಾಗ ಹಿರಿಯೂರಿಗೆ ಶಿಫ್ಟ್ ಆದ ಸುಧಾಕರ್, 2008ರಲ್ಲಿ ಅಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಅಚ್ಚರಿಯ ಜಯ ದಾಖಲಿಸಿದ್ದರು. ಅಂದು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಇವರು ಯಡಿಯೂರಪ್ಪ ಸಂಪುಟದಲ್ಲಿ ಸಮಾಜ ಕಲ್ಯಾಣ, ಮುಜರಾಯಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು.

2010ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಎದ್ದ 16 ಶಾಸಕರಲ್ಲಿ ಸುಧಾಕರ್ ಕೂಡ ಒಬ್ಬರಾಗಿದ್ದರು. ಅಂದು ಸ್ಪೀಕರ್ ಅವರಿಂದ ಅನರ್ಹಗೊಂಡರೂ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿ ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡ ಚತುರ ಇವರು. 2013ರಲ್ಲಿ ಮತ್ತೆ ಕಾಂಗ್ರೆಸ್ ಸೇರಿ ಹಿರಿಯೂರಿನಿಂದ ಗೆದ್ದರು. 2018ರಲ್ಲಿ ಸೋಲು ಕಂಡಿದ್ದರೂ ಛಲ ಬಿಡದ ಸುಧಾಕರ್, 2023ರ ಚುನಾವಣೆಯಲ್ಲಿ ಮತ್ತೆ ಭರ್ಜರಿ ಜಯ ಸಾಧಿಸಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಸಕ್ರಿಯರಾಗಿದ್ದರು.

ಸಚಿವ ಡಿ. ಸುಧಾಕರ್ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲ ಬಂದಾಗ ಹಿರಿಯೂರಿನ ಕೆರೆಗಳ ಸುತ್ತಮುತ್ತ ಸ್ವತಃ ಮೇವು ಬೆಳೆಸಿ ರೈತರ ಜಾನುವಾರುಗಳಿಗೆ ಹಂಚಿದ ಅವರ ಕಾರ್ಯ ಇಂದಿಗೂ ಜನರ ಮನಸ್ಸಿನಲ್ಲಿದೆ. ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಪತ್ನಿ ಹರ್ಷಿಣಿ, ಮಗ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿರುವ ಸುಧಾಕರ್ ಅವರ ರಾಜಕೀಯ ಚತುರತೆ ಮತ್ತು ಜನಸೇವೆ ಜಿಲ್ಲೆಯ ಇತಿಹಾಸದಲ್ಲಿ ಸದಾ ನೆನಪಿನಲ್ಲಿರುವಂತೆ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular