ಬೆಂಗಳೂರು: ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಗುರುವಾರದಂದು ಸಭೆ ಸೇರಿದ್ದ ಸಚಿವರು, ಶಾಸಕರು ದೆಹಲಿಗೆ ಹೋಗಿ ಮನವಿ ಮಾಡುತ್ತಾರೆ ಎಂಬ ವಿಚಾಅರವಾಗಿ ಪ್ರತಿಕ್ರಿಯಿಸಿ, ದಯವಿಟ್ಟು ಬೇಡ ಎಂದು ಮನವಿ ಮಾಡುತ್ತೇನೆ. ನಿಮ್ಮ ಸಮಸ್ಯೆಗಳು ಇದ್ದರೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಅಧಿಕಾರ, ಹುದ್ದೆ ಬೇಕು ಎಂದರೆ ಹೋಗಿ ಮನವಿ ಮಾಡಿಕೊಳ್ಳಿ. ನನ್ನ ವಿಚಾರಕ್ಕೆ ಹೋಗುವುದು ಬೇಡ ಎಂದು ತಿಳಿಸಿದರು.
ಬಾಲಕೃಷ್ಣ ಅವರ ಜನ್ಮದಿನದ ಹೆಸರಿನಲ್ಲಿ 40ಕ್ಕೂ ಹೆಚ್ಚು ಶಾಸಕರು ಸೇರಿದ್ದು, ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆ ಎಂಬ ವಿಚಾರವಾಗಿ, ಯಾವ ಶಕ್ತಿ ಪ್ರದರ್ಶನವೂ ಇಲ್ಲ. ಕೆಲವರು ವಿಶ್ರಾಂತಿ, ಅಧ್ಯಯನಕ್ಕೆ ವಿದೇಶಕ್ಕೆ ಹೋಗುತ್ತಾರೆ. ಕೆಲವರು ದೆಹಲಿಗೆ ಹೋದರೆ, ಮತ್ತೆ ಕೆಲವರು ಭೋಜನ ಕೂಟ ಸೇರುತ್ತಾರೆ. ಅವರ ವೈಯಕ್ತಿಕ ವಿಚಾರಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.
ಕೆಲವರು ಆಸೆ ಇಟ್ಟುಕೊಂಡಿದ್ದಾರೆ. ಹೊಸಬರಿಗೆ ಮಂತ್ರಿ ಆಗುವ ಆಸೆ ಇರುತ್ತದೆ. ನಾನು, ಪರಮೇಶ್ವರ್, ಹೆಚ್ ಕೆ ಪಾಟೀಲ್, ಮಹದೇವಪ್ಪ, ಸಿದ್ದರಾಮಯ್ಯ ಸೇರಿದಂತೆ ನಾವು ಈಗ ಹಳಬರಾದೆವು. ಚಿಕ್ಕ ವಯಸ್ಸಿನಲ್ಲೇ ಮಂತ್ರಿಯಾದವರು. ಈಗ ಹೊಸಬರು ಮಂತ್ರಿ ಆಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ನೋಡೋಣ, ನಾನು ಈ ವಿಚಾರವನ್ನು ದೆಹಲಿ ಅವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ವಿಚಾರವಾಗಿ, ಯಾವುದೇ ವ್ಯಕ್ತಿಗೆ ಕಿರುಕುಳ ನೀಡಬೇಕು ಎಂದರೆ ಅದಕ್ಕೆ ಒಂದು ಮಿತಿ ಇದೆ. ರಾಜಕೀಯ ಉದ್ದೇಶದಿಂದ ಮುಕ್ತಾಯಗೊಂಡಿದ್ದ ಪ್ರಕಾರಣವನ್ನು ಯಡಿಯೂರಪ್ಪ ಅವರ ಸರ್ಕಾರ ಸಿಬಿಐಗೆ ಹಸ್ತಾಂತರ ಮಾಡಿ, ತೊಂದರೆ ನೀಡಲಾಗುತ್ತಿತ್ತು. ಅವರಿಗೆ ಅವರ ಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧ ಹೇರಲಾಗಿತ್ತು. ಚುನಾವಣೆಯಲ್ಲಿ ಅವರು ಮತ ಕೇಳುವಂತಿಲ್ಲ ಎಂಬ ಆದೇಶವನ್ನು ಮೊದಲ ಬಾರಿಗೆ ನೀಡಲಾಗಿತ್ತು. ನಾವು ನ್ಯಾಯಾಲಯಕ್ಕೆ ತಲೆಬಾಗಿ ಗೌರವ ನೀಡಿದೆವು. ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಜಾಮೀನು ನೀಡಿದೆ. ನಾನು ಪ್ರಕರಣದ ವಿಚಾರಣೆ ಗಮನಿಸುತ್ತಾ ಬಂದಿದ್ದೇನೆ. ಈಗ ಅವರಿಗೆ ನ್ಯಾಯ ಸಿಕ್ಕಿದೆ, ಅವರು, ಅವರ ಕುಟುಂಬ, ಕ್ಷೇತ್ರದ ಜನ ಹಾಗೂ ಅವರು ಅನುಭವಿಸಿದ ವೇದನೆ ಯಾರೂ ಮರೆಯಲು ಸಾಧ್ಯವಿಲ್ಲ. ಇದನ್ನು ನಾನೂ ಅನುಭವಿಸಿದ್ದೇನೆ. ದೇವರು ವಿನಯ್ ಕುಲಕರ್ಣಿ ಅವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ನೀಡಲಿ, ನ್ಯಾಯ ಒದಗಿಸಿರುವ ನ್ಯಾಯಾಲಯಕ್ಕೆ ಗೌರವದಿಂದ ಅಭಿನಂದನೆ ಅರ್ಪಿಸುತ್ತೇವೆ ಎಂದು ತಿಳಿಸಿದರು.

