ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಇಂಗ್ಲೆಂಡ್ ತಂಡಕ್ಕೆ 160 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ. ಹೀಗೆ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ದೊಡ್ಡ ಮೊತ್ತ ಕಲೆಹಾಕದೇ ಇರುವುದು ಸದ್ಯ ಪಾಕ್ ಬಳಗದಲ್ಲಿ ಸಂತಸ ಮೂಡಿಸಿದೆ. ನ್ಯೂಜಿಲೆಂಡ್ ಈ ಪಂದ್ಯ ಸೋತರೆ ಪಾಕ್ ಮುಂದಿನ ಪಂದ್ಯದಲ್ಲಿ ದೊಡ್ಡ ಮೊತ್ತದಲ್ಲಿ ಗೆದ್ದು ನೆಟ್ ರನ್‌ರೇಟ್‌ನಲ್ಲಿ ಕಿವೀಸ್ ಹಿಂದಿಕ್ಕಿದರೆ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ ಈ ಸಾಧಾರಣ ಮೊತ್ತವನ್ನು ಇಂಗ್ಲೆಂಡ್ ಬೆನ್ನತ್ತದೇ ಸೋತರೆ ಪಾಕ್ ಟೂರ್ನಿಯಿಂದ ಹೊರಬೀಳಲಿದೆ.
ನ್ಯೂಜಿಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಜೋಡಿ 6.6 ಓವರ್‌ಗಳಲ್ಲಿ 64 ರನ್‌ಗಳ ಜತೆಯಾಟವನ್ನು ಉತ್ತಮ ಆರಂಭವನ್ನು ಕಟ್ಟಿಕೊಟ್ಟಿತು. ಆದರೆ ನಂತರದ ಓವರ್‌ಗಳಲ್ಲಿ ದೊಡ್ಡ ಮೊತ್ತಕ್ಕೆ ಬೇಕಾದ ಪ್ರದರ್ಶನ ತಂಡದ ಇತರೆ ಆಟಗಾರರಿಂದ ಬರಲಿಲ್ಲ. ಸೈಫರ್ಟ್ 35 ರನ್ ಗಳಿಸಿದರೆ, ಫಿನ್ ಅಲೆನ್ 29 ರನ್ ಗಳಿಸಿದರು. ಇನ್ನುಳಿದಂತೆ ರಚಿನ್ ರವೀಂದ್ರ 11, ಗ್ಲೆನ್ ಫಿಲಿಪ್ಸ್ 39, ಮಾರ್ಕ್ ಚಾಂಪ್‌ಮನ್ 15, ಡ್ಯಾರಿಲ್ ಮಿಚೆಲ್ 3, ಕೋಲ್ ಮೆಕ್‌ಕೋನ್ಷಿ 14, ನಾಯಕ ಮಿಚೆಲ್ ಸ್ಯಾಂಟ್ನರ್ ಅಜೇಯ 9 ರನ್ ಹಾಗೂ ಮ್ಯಾಟ್ ಹೆನ್ರಿ ಅಜೇಯ 1 ರನ್ ಕಲೆಹಾಕಿದರು.
ಇಂಗ್ಲೆಂಡ್ ಪರ ಆದಿಲ್ ರಶೀದ್, ವಿಲ್ ಜ್ಯಾಕ್ಸ್, ರೆಹಾನ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರೆ, ಲಿಯಾಮ್ ಡಾಸನ್ ಒಂದು ವಿಕೆಟ್ ಪಡೆದರು.

