ಬೆಂಗಳೂರು: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ, ಫೈರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು, ಮೃತನ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ 25 ಲಕ್ಷ ಹಣ ಪರಿಹಾರ ನೀಡಿರುವ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ.ಕುಮಾರಸ್ವಾಮಿ, ಈ ಹಣ ಸರ್ಕಾರದ್ದೋ, ಕಾಂಗ್ರೆಸ್ ಪಕ್ಷದ್ದೋ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಪರಿಹಾರ ಹಣ ಮೂಲ ಕಾಂಗ್ರೆಸ್ ಪಕ್ಷದ್ದೋ, ಸರ್ಕಾರದಿಂದಲೋ? ಐಟಿ ಇಲಾಖೆ ಏನು ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷಗಳ ಆರೋಪದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಐಟಿ ಸೇರಿದಂತೆ ಇತರೇ ಎಲ್ಲಾ ಇಲಾಖೆಗಳು ವಿರೋಧ ಪಕ್ಷಗಳ ಹತ್ತಿರವೇ ಇದೆಯಲ್ಲವೇ? ಕುಮಾರಸ್ವಾಮಿ ಜೇಬಲ್ಲೇ ಇದ್ದಾವಲ್ಲ? ಎಂದು ತಿರುಗೇತು ನೀಡಿದ್ದಾರೆ.
ಪರಿಹಾರ ಹಣದ ಬಗ್ಗೆ ಸಚಿವ ಜಮೀರ್ ಅಹ್ಮದ್ ಅವರ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ಬಳ್ಳಾರಿಗೆ ಭೇಟಿ ನೀಡುತ್ತಿದ್ದು, ಅಲ್ಲಿಗೆ ಹೋಗಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ ಎಂದರು.
ನಮಗೆ ಈ ರಾಜ್ಯದಲ್ಲಿ ಹಾಗೂ ಬಳ್ಳಾರಿಯಲ್ಲಿ ಶಾಂತಿಯುತ ವಾತಾವರಣ ಉಳಿಯಬೇಕು. ಬಿಜೆಪಿಯವರು ಹತಾಶರಾಗಿ ಎಲ್ಲಾ ಕಡೆ ಗಲಭೆಯಂತಹ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

