ಬೆಳಗಾವಿ: ಇತ್ತೀಚೆಗೆ ಸಾಮಾನ್ಯ ಅಪರಾಧಗಳು ಕಡಿಮೆಯಾಗುತ್ತಿದ್ದರೂ, ಸೈಬರ್ ಕ್ರೈಮ್ ಗಳು ಹೆಚ್ಚಾಗಿವೆ. ಇದನ್ನು ತಡೆಯಲು ಪ್ರತಿ ಜಿಲ್ಲೆಯಲ್ಲಿಯೂ ಸೈಬರ್ ಲ್ಯಾಬ್ ಸ್ಥಾಪಿಸಲಾಗುವುದು. ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯ ವಿವಿಧ ಕಟ್ಟಡಗಳ ಶಂಕುಸ್ಥಾಪನೆ, ಸಿಬ್ಬಂದಿ ವಸತಿಗೃಹ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಡ್ರಗ್ಸ್ ಜಾಲ ಮಟ್ಟ ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಒಂದು ವರ್ಷದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಡ್ರಗ್ಸ್ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3 ವರ್ಷಗಳಲ್ಲಿ ಒಂದೂ ಕೋಮುಗಲಭೆ ಸಂಭವಿಸಿಲ್ಲ. ಪೊಲೀಸ್ ಇಲಾಖೆ ಸರ್ಕಾರದ ಮುಖವಾಣಿ ಇದ್ದಂತೆ. ರಾಜ್ಯದ ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಪೊಲೀಸರಿಗೆ ಜನರ ಸೇವೆ ಮಾಡುವ ಮನೋಭಾವ ಅಗತ್ಯ. ರಾಜ್ಯದ ಪೊಲೀಸರು ಈ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

