ಮಂಗಳೂರು: ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ಸೈಬರ್ ವಂಚನೆ ಎಸಗುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಚೀನಿ ಹ್ಯಾಂಡ್ಲರ್ಗಳಿಂದ ನಿಯಂತ್ರಿಸಲ್ಪಡುತ್ತಿದ್ದ ಈ ಜಾಲವು ಒಂದೇ ಖಾತೆಯಿಂದ 167 ಕೋಟಿ ರೂ. ಹಣ ವರ್ಗಾವಣೆ ನಡೆಸಿತ್ತು. ನೇಪಾಳ ಪೊಲೀಸರ ಸಹಕಾರದೊಂದಿಗೆ 11 ಭಾರತೀಯ ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳೂರಿನ ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯ ವೇಳೆ ನೇಪಾಳದಲ್ಲಿದ್ದುಕೊಂಡು ಭಾರತದಲ್ಲಿ ಸೈಬರ್ ವಂಚನೆ ನಡೆಸುತ್ತಿರುವ ಅಂತರಾಷ್ಟ್ರೀಯ ಸೈಬರ್ ವಂಚನೆ ಜಾಲದ ಬಗ್ಗೆ ಗೊತ್ತಾಗಿದೆ. ಬಂಧಿತ ತಂಡದಲ್ಲಿ ಭಾರತೀಯರ ಜೊತೆಗೆ ಚೀನಾ ಮೂಲದ ವಂಚಕರು ಸೇರಿದ್ದು, ಇಡೀ ಜಾಲವನ್ನು ಚೀನಾದ ಹ್ಯಾಂಡ್ಲರ್ಗಳು ನಿಯಂತ್ರಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಆರೋಪಿಗಳಿಂದ ಲ್ಯಾಪ್ಟಾಪ್ಗಳು, 21 ಮೊಬೈಲ್ ಫೋನ್ಗಳು, 20 ವಿವಿಧ ಕಂಪನಿಯ ಸಿಮ್ ಕಾರ್ಡ್ಗಳು ಹಾಗೂ 20 ಬ್ಯಾಂಕ್ ಡೆಬಿಟ್–ಕ್ರೆಡಿಟ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.
ತನಿಖೆಯಲ್ಲಿ ಒಟ್ಟು 624 ಬ್ಯಾಂಕ್ ಖಾತೆಗಳ ವಿವರ ಪತ್ತೆಯಾಗಿದ್ದು, ಈ ಖಾತೆಗಳ ವಿರುದ್ಧ ಎನ್ ಸಿಆರ್ ಪಿ ಪೋರ್ಟಲ್ನಲ್ಲಿ 4580ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಒಂದು ಖಾತೆಯಲ್ಲೇ 167 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ, ವಂಚಕರು ಬಳಸಿದ್ದ ಉಳಿದ 10 ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗಿದ್ದು, ಈ ಖಾತೆಗಳ ಮೂಲಕ ಸುಮಾರು 30.70 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಖಾತೆದಾರರು ಹಾಗೂ ಏಜೆಂಟರನ್ನು ನೇಮಿಸಿಕೊಂಡು, ದಿನಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಲಾಗುತ್ತಿತ್ತು. ವಂಚನೆಯ ಹಣವನ್ನು ಯುಎಸ್ ಡಾಲರ್ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು. ಈ ಜಾಲಕ್ಕೆ ಕಾಂಬೋಡಿಯಾದಲ್ಲಿರುವ ವಂಚನಾ ಬಿಪಿಓ ಸಹ ಬೆಂಬಲ ನೀಡುತ್ತಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಪ್ರಕರಣದಲ್ಲಿ 11 ಆರೋಪಿಗಳನ್ನು ಬಂಧಿಸಲಗಿದೆ. ಬಂಧಿತರನ್ನು ಗುಜರಾತಿನ ಬಾವಾ ನಗರ್ ಜಿಲ್ಲೆ ನಿವಾಸಿ ಮಕವನ್ ವಿಕ್ರಂ(25), ಪಶ್ಚಿಮ ಬಂಗಾಳದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್ನ ಸಿಂಗಬುಮ್ ಜಿಲ್ಲೆಯ ಪುಪ್ಲ ಶಿವಕುಮಾರ್ ರಾವ್(32), ಉತ್ತರಪ್ರದೇಶದ ಮಾವೋ ಜಿಲ್ಲೆ ನಿವಾಸಿ ಗೌರವ್ ಪಾಂಡೆ(24), ಉತ್ತರ ಪ್ರದೇಶದ ಸುಲ್ತಾನ್ ಪುರ್ ಜಿಲ್ಲೆ ಹರ್ಷ್ ಮಿಸ್ರಾ(22), ಜಾರ್ಖಂಡ್ ಮೂಲದ ರಾಜೇಶ್ ಮಂಡನ್(30), ಲಖನೌ ಮೂಲದ ಮೊಹಮ್ಮದ್ ಆಕೀಬ್ ಅಲಿ(27), ಬಿಹಾರದ ನಲಂದಾ ಜಿಲ್ಲೆಯ ರಾಜೀವ್ ರಂಜನ್ ಕುಮಾರ್(30), ಜಾರ್ಖಂಡ್ ನಿವಾಸಿ ಮಿಥುನ್ ಕುಮಾರ್ ಮಂಗರಾಜ್(38), ರಾಜಸ್ಥಾನದ ಜೈಪುರದ ಓಂ ಪ್ರಕಾಶ್ ಯಾಧವ್ (37), ಝಾನ್ಸಿ ಮೂಲದ ನೌಶಾದ್ ಅಲಿ(34) ಎಂದು ಗುರುತಿಸಲಾಗಿದೆ.

