
ವಿಜಯಪುರ: ಪ್ರೀತಿಸಿದ ಹುಡುಗಿ ಮದುವೆಯಾದ ನಂತರವೂ ಆಕೆಯೊಂದಿಗೆ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ ಕೊಲೆಯಾಗಿದ್ದಾನೆ.
ಅಪ್ರಾಪ್ತೆ ಮತ್ತು ಆಕೆಯ ತಂದೆ ಹಾಗೂ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ಚಡಚಣದ ಆಶ್ರಯ ಕಾಲೋನಿ ಸಮೀಪ ಜುಲೈ 10 ರಂದು ಅರೆಬರೆ ಸ್ಥಿತಿಯಲ್ಲಿ ಸುಟ್ಟಿದ್ದ ಯುವಕನ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಇಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ನಾಪತ್ತೆಯಾಗಿದ್ದು, ಮೃತಪಟ್ಟ ವ್ಯಕ್ತಿ 23 ವರ್ಷದ ಅರವಿಂದ ಎನ್ನುವುದು ಗೊತ್ತಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಇಂಡಿಯಲ್ಲಿ ರೂಮ್ ಮಾಡಿಕೊಂಡಿದ್ದ ಅರವಿಂದ ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇವರ ಲವ್ ಸ್ಟೋರಿ ಗೊತ್ತಾಗಿ ಹುಡುಗಿ ಮನೆಯವರು ಅವಸರದಲ್ಲಿ ಚಡಚಣದ ಅಜಿತ್ ಜೊತೆಗೆ ಮದುವೆ ಮಾಡಿದ್ದಾರೆ.
ಆದರೂ, ಅಪ್ರಾಪ್ತೆಯೊಂದಿಗೆ ಅರವಿಂದ ಪ್ರೀತಿ ಮುಂದುವರೆಸಿದ್ದ. ಈ ವಿಚಾರ ತಿಳಿದ ಅಜಿತ್ ಕೆಂಡಾಮಂಡಲನಾಗಿದ್ದು, ಹುಡುಗಿಯ ತಂದೆಯೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ.
ಅಪ್ರಾಪ್ತೆ ಮೂಲಕ ಅರವಿಂದನನ್ನು ಚಡಚಣಕ್ಕೆ ಕರೆಸಿಕೊಂಡು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಕೊಲೆ ರಹಸ್ಯ ಬಯಲಿಗೆಳೆದು ಅಪ್ರಾಪ್ತೆ, ಆಕೆಯ ತಂದೆ ಮತ್ತು ಗಂಡನನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.