ನಕಲಿ ಬಿಲ್‌ಗಳ ಮೂಲಕ ಇನ್‌ಪುಟ್ ತೆರಿಗೆ ಕ್ರೆಡಿಟ್ ಅಕ್ರಮಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಬೆನ್ನಿಗೇ, ಜಿಎಸ್‌ಟಿ ಅಕ್ರಮದ ವಿಚಾರದಲ್ಲಿ ಗುಜರಾತ್ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂಬ ವಿಚಾರ ಕಂಡು ಬಂದಿದೆ.
ಕೇಂದ್ರ ವಿತ್ತ ಸಚಿವಾಲಯ ಸಂಸತ್ತಿನಲ್ಲಿ ಮುಂದಿಟ್ಟ ವರದಿ ಪ್ರಕಾರ ಗುಜರಾತ್‌ನಲ್ಲಿ 2017-18 ರಿಂದ 2020-21ರ ನಡುವೆ ಜಿಎಸ್‌ಟಿ ಸಂಬಂಧ 2,848 ಹಗರಣಗಳು ಘಟಿಸಿವೆ ಎಂದು ತಿಳಿದು ಬಂದಿದೆ.
ದೆಹಲಿ (3,295), ತಮಿಳುನಾಡು (3,220) ಹಾಗೂ ಮಹಾರಾಷ್ಟ್ರ (3,195) ರಾಜ್ಯಗಳಲ್ಲಿ ಗುಜರಾತ್‌ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜಿಎಸ್‌ಟಿ ವಂಚನೆಯ ಘಟನೆಗಳು ವರದಿಯಾಗಿವೆ.
“ಜಿಎಸ್‌ಟಿ ವಂಚನೆ ದೇಶಾದ್ಯಂತ ನಡೆಯುತ್ತಿದೆ. ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತಂದ ವೇಳೆ, ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವ ವೇಳೆ ದೈಹಿಕ ಸಾಕ್ಷ್ಯಾಧಾರಗಳ ಅಗತ್ಯವಿರಲಿಲ್ಲ. ಇದರ ಪರಿಣಾಮ ಬಹಳಷ್ಟು ಮಂದಿ ಜಿಎಸ್‌ಟಿಯ ನಕಲಿ ನೋಂದಣಿಗಳನ್ನು ಮಾಡಿಸಿಕೊಂಡಿದ್ದಾರೆ. ಇದರೊಂದಿಗೆ ತಮ್ಮ ಜಿಎಸ್‌ಟಿ ನೋಂದಣಿಗಳನ್ನು ಬಳಸಿಕೊಂಡು ಅನೇಕರು ಅಕ್ರಮವಾಗಿ ಇನ್‌ಪುಟ್ ಕ್ರೆಡಿಟ್‌ಗಳನ್ನು ಕ್ಲೇಂ ಮಾಡಿಕೊಂಡಿದ್ದಾರೆ. ಪೂರೈಕೆದಾರ ತೆರಿಗೆ ಪಾವತಿಸಿದಲ್ಲಿ ಮಾತ್ರವೇ ಇನ್‌ಪುಟ್ ಕ್ರೆಡಿಟ್ ಪಡೆಯಬಹುದೆಂಬ ಹೊಸ ನಿಯಮವನ್ನು ಕಳೆದ ವರ್ಷ ಜಾರಿಗೆ ತರಲಾಗಿದೆ. ಇಂಥ ಅನೇಕ ಕಾರಣಗಳಿಂದಾಗಿ ಹೊಸ ತೆರಿಗೆ ನೀತಿ ಜಾರಿಗೆ ಬಂದಾಗಿನಿಂದಲೂ ತೆರಿಗೆ ವಂಚನೆ ವಿಪರೀತವಾಗಿದೆ” ಎಂದು ರಾಜ್ಯ ವಾಣಿಜ್ಯ ತೆರಿಗೆ ಆಯುಕ್ತ ಜೆ.ಪಿ ಗುಪ್ತಾ ತಿಳಿಸಿದ್ದಾರೆ.
ಜಿಎಸ್‌ಟಿ ವಂಚನೆ ಪ್ರಕರಣ ಗುಜರಾತ್‌ನಲ್ಲಿ ಇದುವರೆಗೂ ಕನಿಷ್ಠ 50 ಮಂದಿಯನ್ನು ಬಂಧಿಸಲಾಗಿದೆ.