ಮೈಸೂರು: ಮೈಸೂರು ಜಿಲ್ಲೆ ದೊಡ್ಡಕಾನ್ಯದಲ್ಲಿ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಮರ್ಯಾದ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
36 ವರ್ಷದ ಮೀನಾಕ್ಷಿ ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಮೂರು ತಿಂಗಳ ಹಿಂದೆ ಪೋಷಕರಿಂದ ಕಿರುಕುಳವಾಗುತ್ತಿದೆ ಎಂದು ಹೋರಾಟ ನಡೆಸಿದ್ದ ಮೀನಾಕ್ಷಿ ಬುಧವಾರ ರಾತ್ರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮೃತಳ ಸಹೋದರಿ ಈ ಕುರಿತು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದ್ದಾರೆ.
ಕೃಷಿ ಇಲಾಖೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವಿಕಲಚೇತನರಾಗಿದ್ದ ಮೀನಾಕ್ಷಿ ಅನ್ಯಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಕಾರಣ ಕಳೆದ ಮೇ ತಿಂಗಳಲ್ಲಿ ಸೇವಾ ಸಂಸ್ಥೆ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದರು. ನಂತರದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯುವತಿಯ ಪೋಷಕರನ್ನು ಕರೆಸಿ ಬುದ್ಧಿಮಾತು ಹೇಳಿದ್ದಾರೆ.
ಇದಾದ ನಂತರದಲ್ಲಿ ಮೀನಾಕ್ಷಿ ನಂಜನಗೂಡಿನಲ್ಲಿ ಇರುವ ತಮ್ಮ ಸೋದರಿ ಮನೆಯಲ್ಲಿ ತಂಗಿದ್ದು, ಕೆಲದಿನಗಳ ಹಿಂದೆ ದೊಡ್ಡ ಕಾನ್ಯದಲ್ಲಿರುವ ತಂದೆಯ ಮನೆಗೆ ಆಗಮಿಸಿದ್ದಾರೆ. ಬುಧವಾರ ರಾತ್ರಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅವರ ಸಾವಿನ ಕುರಿತಾಗಿ ಅನುಮಾನ ವ್ಯಕ್ತವಾಗಿದೆ.