ವಿಜಯಪುರ: ವಿಜಯಪುರದ ಕಲಕೇರಿ ಸಮೀಪ ಸಲಾದಳ್ಳಿ ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಪ್ರೇಮಿಗಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಸಲಾದಳ್ಳಿಯ ಆಟೋ ಚಾಲಕ ಬಸವರಾಜ ಬಡಿಗೇರ(19), ಖಾನಾಪುರ ಗ್ರಾಮದ ದಾವಲಬಿ(16) ಕೊಲೆಯಾದವರು ಎಂದು ಹೇಳಲಾಗಿದೆ. ಅನ್ಯಧರ್ಮೀಯರಾಗಿದ್ದ ಬಸವರಾಜ ಮತ್ತು ದಾವಲಬಿ ಪ್ರೀತಿಸಿದ್ದು, ಇವರ ಪ್ರೀತಿಗೆ ಪೋಷಕರ ವಿರೋಧವಿತ್ತು ಎನ್ನಲಾಗಿದೆ.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲ್ಲೂಕಿನ ಸಲಾದಳ್ಳಿಯ ಹೊರ ಭಾಗದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ದಾವಲಬಿ ತಂದೆ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಪೋಷಕರ ವಿರೋಧದ ನಡುವೆಯೂ ಇಬ್ಬರ ನಡುವೆ ಪ್ರೀತಿ ಮುಂದುವರೆದಿದ್ದು, ನಿನ್ನೆ ಸಂಜೆ ದಾವಲಬಿ, ಬಸವರಾಜ್ ನನ್ನು ಭೇಟಿಯಾಗಲು ಹೋಗಿದ್ದ ವೇಳೆ ಗಮನಿಸಿದ ಆಕೆಯ ತಂದೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.