ಕಲ್ಬುರ್ಗಿ: ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಚಂದ್ರಕಾಂತ್ ಅವರ ಪುತ್ರ ಅಭಿಷೇಕ್(27) ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಗುರುವಾರ ಬೆಳಗ್ಗೆ ಜಿಮ್ ಗೆ ಹೋಗುವುದಾಗಿ ಅಭಿಷೇಕ್ ಮನೆಯಿಂದ ತೆರಳಿದ್ದರು. ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದು, ಕಲ್ಬುರ್ಗಿ ನಗರದ ಬಸ್ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿದ ಅಭಿಷೇಕ್ ತಪ್ಪಿಸಿಕೊಂಡು ಓಡಿದ್ದಾರೆ. ಬಸ್ ನಿಲ್ದಾಣದ ಎದುರಲ್ಲೇ ದುಷ್ಕರ್ಮಿಗಳು ಅಭಿಷೇಕ್ ಕತ್ತು ಕೊಯ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆನ್ನಲಾಗಿದೆ.
ಬಸ್ ನಿಲ್ದಾಣದಲ್ಲಿ ನೂರಾರು ಜನರ ಎದುರಲ್ಲೇ ಘಟನೆ ನಡೆದಿದ್ದು, ಹಬ್ಬದ ಹೊತ್ತಲ್ಲಿ ನಡೆದ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.