
ಗದಗ: ಗದಗ ಜಿಲ್ಲೆ ನರಗುಂದ ಪಟ್ಟಣದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ಕೈ ಕತ್ತರಿಸಿ ಹತ್ಯೆಮಾಡಿದ್ದಾರೆ.
ಘಟನೆಯನ್ನು ಖಂಡಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಅವರು ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಬಾಲಕಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನರಗುಂದ ಪಟ್ಟಣದ ಬಾಲಕಿ ಮಾರ್ಚ್ 20 ರಂದು ಹೊಲಕ್ಕೆ ಹೋಗುವುದಾಗಿ ಮನೆಯಿಂದ ತೆರಳಿ ನಾಪತ್ತೆಯಾಗಿದ್ದಾಳೆ. ಆಕೆಗಾಗಿ ಹುಡುಕಾಟ ನಡೆಸಿದ ಪೋಷಕರು ಮಾರ್ಚ್ 23 ರಂದು ನರಗುಂದ ಪೊಲೀಸರಿಗೆ ದೂರು ನೀಡಿದ್ದಾರೆ. ಮಾರ್ಚ್ 27 ರಂದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದ ಜಮೀನಿನಲ್ಲಿ ಬಾಲಕಿಯ ಮೃತದೇಹ ಕಂಡು ಬಂದಿದೆ.
ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡಿದ್ದು, ಮಗಳ ಮೃತದೇಹವನ್ನು ಪೋಷಕರು ಗುರುತಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರಗೈದು ಕೈಕತ್ತರಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಎಂಟನೇ ತರಗತಿ ಓದುತ್ತಿದ್ದ ಬಾಲಕಿಗೆ ಲಾಕ್ಡೌನ್ ಸಂದರ್ಭದಲ್ಲಿ ಯುವಕನೊಬ್ಬ ಪರಿಚಿತವಾಗಿ ಆಕೆಯ ಹಿಂದೆ ಬಿದ್ದಿದ್ದ. ಪೋಷಕರು ಬುದ್ಧಿವಾದ ಹೇಳಿದ್ದರು. ಮನೆಯಲ್ಲೇ ಇದ್ದ ಬಾಲಕಿ ಮಾರ್ಚ್ 20 ರಂದು ಹೊಲಕ್ಕೆ ಹೋಗುವಾಗ ಅಪಹರಿಸಿದ ಯುವಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಇಂತಹ ಕೃತ್ಯವೆಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.