ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ಆಸ್ತಿ, ಹಣದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ಮಗ ಹಾಗೂ ಸಂಬಂಧಿಕರೊಂದಿಗೆ ಸೇರಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
35 ವರ್ಷದ ಮಹಿಳೆ ಸಿದ್ದಮ್ಮ ಕೊಲೆಯಾದವು ಎಂದು ಹೇಳಲಾಗಿದೆ. ಸಿದ್ದಮ್ಮಳ ಪತಿ ಕೆಂಚವೀರಪ್ಪ, ಮಗ ವಿಕಾಸ್, ಮಾವ ಶೇಖರಪ್ಪ ಹಾಗೂ ರಾಜಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 17 ರಂದು ಹಳೇ ಬಿಸ್ಲೇರಿ ಗ್ರಾಮದ ಹೊರವಲಯದ ಚಾನಲ್ ಬಳಿ ಸಿದ್ದಮ್ಮನ ಮೃತದೇಹ ಪತ್ತೆಯಾಗಿತ್ತು. ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ.
ದಂಪತಿಯ ನಡುವೆ ಆಸ್ತಿ ಮತ್ತು ಹಣದ ವಿಚಾರವಾಗಿ ವೈಮನಸ್ಸು ಇತ್ತು ಎನ್ನುವುದು ಗೊತ್ತಾಗಿದೆ. ಪದವಿ ಓದುತ್ತಿರುವ ಮಗ ಹಾಗೂ ಸಂಬಂಧಿಕರೊಂದಿಗೆ ಸೇರಿ ಕೆಂಚವೀರಪ್ಪ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಚಾನಲ್ ಗೆ ಎಸೆದಿದ್ದಾನೆ ಎನ್ನುವುದು ಗೊತ್ತಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಸಿಪಿಐ ಮಂಜುನಾಥ, ಹದಡಿ ಪಿಎಸ್ಐ ಪ್ರಸಾದ್, ಎಎಸ್ಐ ಚನ್ನವೀರಪ್ಪ ಹಾಗೂ ಸಿಬ್ಬಂದಿಗಳಾದ ಮಂಜುನಾಥ, ಕರಿಬಸಪ್ಪ, ಶಿವಕುಮಾರ್, ವೀರಭದ್ರಪ್ಪ, ಅಣ್ಣಯ್ಯ, ಶ್ರೀನಿವಾಸ್ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು, ತನಿಖಾ ತಂಡಕ್ಕೆ ಎಸ್.ಪಿ. ಹನುಮಂತರಾಯ ಬಹುಮಾನ ಘೋಷಿಸಿದ್ದಾರೆ.