ಬೆಂಗಳೂರು: ಬೆಂಗಳೂರಿನ ಆರ್.ಟಿ. ನಗರದ ನೃಪತುಂಗ ಲೇಔಟ್ ನಲ್ಲಿ ಒಂಟಿಯಾಗಿದ್ದ ಬಾರ್ ಡ್ಯಾನ್ಸರ್ ಳನ್ನು ದುಷ್ಕರ್ಮಿಗಳು ಕತ್ತುಕೊಯ್ದು ಹತ್ಯೆಮಾಡಿದ್ದಾರೆ.
28 ವರ್ಷದ ಜಾರಾ ಮೃತಪಟ್ಟ ಯುವತಿ. ರೆಸಿಡೆನ್ಸಿ ರಸ್ತೆಯ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಜಾರಾ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಯುವತಿಯ ಸಹೋದರ ಮುಸ್ತಫಾ ಶನಿವಾರ ಮಧ್ಯಾಹ್ನ 12 ಗಂಟೆಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಛತ್ತಿಸ್ಗಢ ಮೂಲದ ಜಾರಾ ತಂದೆ-ತಾಯಿ ಮೃತಪಟ್ಟಿದ್ದಾರೆ. ತಂಗಿ ಮತ್ತು ಇಬ್ಬರು ಸಹೋದರರೊಂದಿಗೆ ಬೆಂಗಳೂರಿಗೆ ಬಂದಿದ್ದ ಜಾರಾ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಆರು ತಿಂಗಳ ಹಿಂದೆ ತಂಗಿಗೆ ಮದುವೆ ಮಾಡಿದ್ದು ಸಹೋದರರು ಜಾಲಹಳ್ಳಿಯಲ್ಲಿ ವಾಸವಾಗಿದ್ದಾರೆ. ಅಸ್ಸಾಂ ಮೂಲದ ಯುವಕನೊಂದಿಗೆ ಜಾರಾ ಮದುವೆ ನಿಶ್ಚಯವಾಗಿತ್ತು.
ಆತ ಶನಿವಾರ ಬೆಳಗ್ಗೆ ಕರೆ ಮಾಡಿದಾಗ ಜಾರಾ ಕರೆ ಸ್ವೀಕರಿಸಲಿಲ್ಲ. ಆಕೆಯ ಸಹೋದರ ಮುಸ್ತಫಾಗೆ ಕರೆ ಮಾಡಿ ವಿಷಯ ತಿಳಿಸಿದ್ದು ಮುಸ್ತಫಾ ಮನೆಗೆ ಹೋದಾಗ ಗೇಟ್ ಬೀಗ ಹಾಕಿದ್ದು, ಮನೆ ಬಾಗಿಲು ಕೂಡ ಬಂದ್ ಆಗಿದೆ. ಬಾಲ್ಕನಿಯಿಂದ ನೋಡಿದಾಗ ಜಾರಾ ಬಿದ್ದಿರುವುದು ಕಂಡು ಬಂದಿದ್ದು, ಪೊಲೀಸರು ಆಗಮಿಸಿ ಡೋರ್ ಓಪನ್ ಮಾಡಿದಾ ರಕ್ತದ ಮಡುವಿನಲ್ಲಿದ್ದ ಜಾರಾ ಮೃತದೇಹ ಕಂಡುಬಂದಿದೆ. ಆರ್.ಟಿ. ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.