
ಬಾಗಲಕೋಟೆ: ಚಿಕ್ಕಮ್ಮನ ಮಗನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಮಹಿಳೆ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ 45 ವರ್ಷದ ಶಾಂತಪ್ಪ ಎಂದು ಹೇಳಲಾಗಿದೆ. ಇಳಕಲ್ ತಾಲೂಕಿನ ಮಹಾಂತಪುರ ಗ್ರಾಮದ ಶಾಂತಪ್ಪನನ್ನು ಆತನ ಪತ್ನಿ ಮತ್ತು ಪ್ರಿಯಕರ ಕೊಲೆ ಮಾಡಿದ್ದಾರೆ. ಶಾಂತಪ್ಪನ ಪತ್ನಿ ಚಿಕ್ಕಮ್ಮನ ಮಗನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಈ ವಿಚಾರ ತಿಳಿದ ಶಾಂತಪ್ಪ ಬೈದು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ್ದಾರೆ. ಇದೇ ವಿಚಾರಕ್ಕೆ ಗಲಾಟೆಯಾಗಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಶಾಂತಪ್ಪನನ್ನ ಕೊಲೆ ಮಾಡಲಾಗಿದೆ.
ಅಕ್ಟೋಬರ್ 23 ರಂದು ಮಹಾಂತಪುರ ಗ್ರಾಮದ ಹೊರವಲಯದಲ್ಲಿ ರಾಡ್ ನಿಂದ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ ಪತ್ನಿ ಮತ್ತು ಪ್ರಿಯಕರ ಹಾಗೂ ಮತ್ತೊಬ್ಬ ಸಹಚರ ಮೃತದೇಹವನ್ನು ಆಲಮಟ್ಟಿ ಜಲಾಶಯದಲ್ಲಿ ಎಸೆದಿದ್ದಾರೆ. ಶಾಂತಪ್ಪನ ಸಹೋದರ ಇಳಕಲ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಪತ್ನಿ, ಪ್ರಿಯಕರ ಹಾಗೂ ಮತ್ತೊಬ್ಬ ಸೇರಿ ಕೊಲೆ ಮಾಡಿರುವುದು ಗೊತ್ತಾಗಿದೆ. ಮೂವರನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.