ಧಾರವಾಡ: ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಕೂಡಿಹಾಕಿ ಆಕೆಯ ಮಗುವನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.
ರೂಪಾ ಹಾಗೂ ಮೈನುದ್ದೀನ್ ದಂಪತಿ, ಭಾರತಿ ವಾಲ್ಮೀಕಿ ಎಂಬಾಕೆಯ ಬಳಿ 72,000 ರೂಪಾಯಿ ಸಾಲ ಪಡೆದುಕೊಂಡಿದ್ದರು. ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಎಂದು ಭಾರತಿ 1.50 ಲಕ್ಷ ರೂಪಾಯಿ ವಾಪಸ್ ನಿಡುವಂತೆ ಕೇಳಿದ್ದಳು. ಇದೇ ವೇಳೆ ರೂಪಾ ಮುದ್ದಾದ ಮಗುವಿಗೆ ಜನ್ಮ ನೀಡಿದ್ದು ಹಣ ವಾಪಸ್ ಕೊಡಲು ಸಾಧ್ಯವಾಗಿರಲಿಲ್ಲ.
ಅತಿಥಿ ಉಪನ್ಯಾಸಕರ ನೇಮಕಾತಿಗೆ ಅನುಮೋದನೆ
ಬಾಣಂತಿ ಹಾಗೂ ಮಗುವನ್ನು 40 ದಿನಗಳ ಕಾಲ ಮನೆಯಲ್ಲಿ ಕೂಡಿ ಹಾಕಿದ ಭಾರತಿ ಚಿತ್ರಹಿಂಸೆ ನೀಡಿದ್ದಾಳೆ. ಬಳಿಕ ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡು ಹಸುಗೂಸನ್ನು 2.50 ಲಕ್ಷ ರೂಪಾಯಿಗೆ ಉಡುಪಿ ಮೂಲದ ವೈದ್ಯ ದಂಪತಿಗೆ ಮಾರಾಟ ಮಾಡಿದ್ದಾಳೆ. ಒಂದೂವರೆ ಲಕ್ಷವನ್ನು ತನ್ನ ಸಾಲ ಭರ್ತಿ ಮಾಡಿಕೊಂಡು ಉಳಿದ ಹಣವನ್ನು ಮೈನುದ್ದೀನ್ ಗೆ ನೀಡಿದ್ದಾಳೆ ಎನ್ನಲಾಗಿದೆ.
ಹೆತ್ತ ಮಗುವಿನಿಂದ ದೂರವಾದ ತಾಯಿ ರೂಪಾ ಪೊಲೀಸರಿಗೆ ಮೆಸೇಜ್ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ವಿದ್ಯಾಗಿರಿ ಪೊಲೀಸರು ಮಗು ಮಾರಾಟ ಜಾಲವನ್ನೇ ಭೇದಿಸಿದ್ದಾರೆ. ಭಾರತಿ ಹಾಗೂ ಆಕೆಯ ಮಗ ರಮೇಶ್, ಅಳಿಯ ವಿನಾಯಕ ಹಾಗೂ ರವಿ ಹೆಗಡೆ ಎಂಬುವವರನ್ನು ಬಂಧಿಸಿದ್ದಾರೆ. ಉಡುಪಿ ವೈದ್ಯ ದಂಪತಿಯಿಂದ ಮಗುವನ್ನು ರಕ್ಷಿಸಿದ್ದಾರೆ.